ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ ಹೊಣೆ ಹೊತ್ತ ‘ಹಿಂದೂ ರಕ್ಷಾ ದಳ’; ದೀಪಿಕಾ ಸಿನಿಮಾ ಬಹಿಷ್ಕಾರಕ್ಕೆ ಕರೆ

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್‌ ಮಾಡಿದ ಪಿಂಕಿ ಚೌಧರಿ
Last Updated 8 ಜನವರಿ 2020, 2:45 IST
ಅಕ್ಷರ ಗಾತ್ರ

ನವದೆಹಲಿ: ಜವಾಹರಲಾಲ್‌ ನೆಹರೂ ವಿ.ವಿ.ಯಲ್ಲಿ (ಜೆಎನ್‌ಯು) ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಭಾನುವಾರ ಸಂಜೆ ನಡೆದ ದಾಳಿಯ ಹೊಣೆಯನ್ನು ‘ಹಿಂದೂ ರಕ್ಷಾ ದಳ’ ಎಂಬ ಸಂಘಟನೆ ಹೊತ್ತುಕೊಂಡಿದೆ.

ಅಷ್ಟೇನೂ ಪರಿಚಿತವಲ್ಲದ ಈ ಸಂಘಟನೆಯ ಪಿಂಕಿ ಚೌಧುರಿ ಎಂಬುವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಒಂದು ವಿಡಿಯೊ ಪ್ರಕಟಿಸಿದ್ದು, ‘ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರನ್ನು ಹೀಗೆಯೇ ಎದುರಿಸಲಾಗುವುದು’ ಎಂದಿದ್ದಾರೆ.

‘ಜೆಎನ್‌ಯು ಹಲವು ವರ್ಷಗಳಿಂದ ಕಮ್ಯುನಿಸ್ಟರ ಕೋಟೆಯಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ಭಾನುವಾರ ನಡೆದ ಘಟನೆಯ ಸಂಪೂರ್ಣ ಹೊಣೆಯನ್ನು ಹಿಂದೂ ರಕ್ಷಾ ದಳದ ಭೂಪೇಂದ್ರ ತೋಮರ್‌ ಹಾಗೂ ಪಿಂಕಿ ಚೌಧರಿ ಹೊರುತ್ತಾರೆ. ಭಾರತ ಮಾತೆಯ ರಕ್ಷಣೆಗಾಗಿ ಇಂಥ ಕೆಲಸ ಮಾಡಲು ಹಿಂಜರಿಯುವವರಿಗೆ ಈ ದೇಶದಲ್ಲಿ ಜೀವಿಸುವ ಹಕ್ಕು ಇಲ್ಲ’ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

‘ನಮ್ಮ ಸಂಘಟನೆಯು ಹಿಂದುತ್ವ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ಸಂಘಟನೆಯ ಬಗ್ಗೆ ಉಳಿದ ವಿಚಾರಗಳನ್ನು ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸಲಾಗುವುದು. ದೇಶದಲ್ಲಿ ಎಂಥ ವಾತಾವರಣ ನಿರ್ಮಾಣ ವಾಗಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ರಾಷ್ಟ್ರವಿರೋಧಿ ಘೋಷಣೆ ಕೂಗುವವರನ್ನು ಪ್ರತಿಯೊಬ್ಬರೂ ಬೆಂಬಲಿಸುತ್ತಿದ್ದಾರೆ’ ಎಂದು ಮಾಧ್ಯಮ ಪ್ರತಿನಿಧಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಜೆಎನ್‌ಯು ಸುರಕ್ಷಿತ: ಕುಲಪತಿ

* ‘ನೆಹರೂ ಹೆಸರಿನ ವಿಶ್ವವಿದ್ಯಾಲಯವು ತಪ್ಪು ಕಾರಣದಿಂದ ಸುದ್ದಿಯಾಗುತ್ತಿರುವುದು ಬೇಸರದ ವಿಚಾರ. ಘಟನೆಯ ಹಿಂದೆ ಯಾರೇ ಇರಲಿ, ತಪ್ಪಿತಸ್ಥರನ್ನು ಪತ್ತೆಮಾಡಿ ಶೀಘ್ರ ಶಿಕ್ಷಿಸಬೇಕು’ ಎಂದು ಕೇಂದ್ರದ ಸಚಿವ ರಾಮದಾಸ್‌ ಆಠವಳೆ ಹೇಳಿದ್ದಾರೆ.

* ‘ವಿದ್ಯಾರ್ಥಿಗಳು ಗಾಯಗೊಂಡಿರುವುದಕ್ಕೆ ನಮಗೆ ಅತೀವ ಬೇಸರವಿದೆ. ಕ್ಯಾಂಪಸ್‌ ಈಗ ಸುರಕ್ಷಿತವಾಗಿದೆ, ಹಿಂದಿನದ್ದನ್ನೆಲ್ಲ ಮರೆತು, ಮತ್ತೆ ಎಲ್ಲರೂ ಕ್ಯಾಂಪಸ್‌ಗೆ ಬರಬೇಕು’ ಎಂದು ವಿ.ವಿಯ ಕುಲಪತಿ ಜಗದೀಶ್‌ ಕುಮಾರ್‌ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

* ಮುಖ ಮುಚ್ಚಿಕೊಂಡಿದ್ದ ಕೆಲವರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಮಂಗಳವಾರ ಜೆಎನ್‌ಯು ಉಪನ್ಯಾಸಕಿ ಸುಚಿತ್ರಾ ಸೇನ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದಾಳಿಕೋರರು ಮೊದಲು ನನ್ನ ಭುಜಕ್ಕೆ ಕಲ್ಲಿನಿಂದ ಹೊಡೆದಿದ್ದರು, ಆನಂತರ ತಲೆಗೆ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

* ಮುಂಬೈಯ ಗೇಟ್‌ವೇ ಆಫ್‌ ಇಂಡಿಯಾದ ಮುಂದೆ ನಡೆಸುತ್ತಿದ್ದ ಪ್ರತಿಭಟನೆಯನ್ನು, ಆಜಾದ್‌ ಮೈದಾನಕ್ಕೆ ಸ್ಥಳಾಂತರಿಸುವಂತೆ ಪೊಲೀಸರು ಸೂಚನೆ ನೀಡಿದ ಕಾರಣಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಂಗಳವಾರ ಕೊನೆಗೊಳಿಸಿದ್ದಾರೆ

* ಆರ್ಥಿಕ ಅಂಕಿಅಂಶಗಳ ಪರಿಶೀಲನೆಗಾಗಿ ಸರ್ಕಾರವು ರಚಿಸಿದ್ದ ಸಮಿತಿಯ ಸದಸ್ಯ, ಜೆಎನ್‌ಯು ಉ‍ಪನ್ಯಾಸಕ ಪಿ.ಸಿ. ಚಂದ್ರಶೇಖರ್‌ ಅವರು ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ‘ಜೆಎನ್‌ಯುದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದರಿಂದ ಸಮಿತಿಯ ಸಭೆಗೆ ಹಾಜರಾಗಲು ಸಾಧ್ಯವಾಗದು’ ಎಂದು ಅವರು ಸರ್ಕಾರಕ್ಕೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಎನ್‌ವೈಟಿ ವರದಿಗೆ ಜಾವಡೇಕರ್‌ ವ್ಯಂಗ್ಯ

‘ಜೆಎನ್‌ಯು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದವರು ‘ಜೈ ಶ್ರೀರಾಮ್‌’ ಘೋಷಣೆ ಕೂಗುತ್ತಿದ್ದರು’ ಎಂದು ವರದಿ ಮಾಡಿರುವ ‘ನ್ಯೂ ಯಾರ್ಕ್‌ ಟೈಮ್ಸ್‌’ ಪತ್ರಿಕೆಯನ್ನು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಟೀಕಿಸಿದ್ದಾರೆ.

‘ನ್ಯೂ ಯಾರ್ಕ್‌ ಟೈಮ್ಸ್ ಪತ್ರಿಕೆಯಲ್ಲಿ ‘ರಾಮ ಭಕ್ತ’ ವರದಿಗಾರರು ಇದ್ದಂತೆ ಕಾಣಿಸುತ್ತಿದೆ. ಎಲ್ಲೆಲ್ಲೂ ಅವರಿಗೆ ರಾಮನೇ ಕಾಣಿಸುತ್ತಿರಬೇಕು’ ಎಂದು ವ್ಯಂಗ್ಯವಾಡಿದ ಜಾವಡೇಕರ್‌, ‘ಕಳೆದ ವಾರ ಪಾಕಿಸ್ತಾನದಲ್ಲಿ ಸಿಖ್‌ ಗುರುದ್ವಾರದ ಮೇಲೆ ನಡೆದ ದಾಳಿಯ ಬಗೆಗಿನ ವರದಿಯನ್ನು ನಾನು ಆ ಪತ್ರಿಕೆಯಲ್ಲಿ ನೋಡಲು ಉತ್ಸುಕನಾಗಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ರಾಷ್ಟ್ರವಾದಿ’ಗಳು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬ್ರಿಟಿಷ್‌ ದಿನಪತ್ರಿಕೆ ‘ಫೈನಾನ್ಶಿಯಲ್‌ ಟೈಮ್ಸ್‌’ ಮಾಡಿರುವ ವರದಿಗೆ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದ್ದ ಜಾವಡೇಕರ್‌, ‘ಭಾರತವನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗುತ್ತಿದೆ ಎಂಬುದು ನನಗೆ ಗೊತ್ತಿದೆ. ಆದರೆ, ಪ್ರತಿಯೊಂದು ಘಟನೆಯಲ್ಲೂ ಭಾರತದ ವಿಘಟನೆಯಾಗುತ್ತದೆ ಎಂದು ಊಹಿಸುವುದನ್ನು ನಿಲ್ಲಿಸಿ’ ಎಂದಿದ್ದರು.

‘ಜೆಎನ್‌ಯು ದಾಳಿ ಘಟನೆ ಬಗ್ಗೆ ತನಿಖೆಗೆ ಗೃಹ ಸಚಿವಾಲಯವು ಆದೇಶ ನೀಡಿದೆ. ಮುಸುಕುಧಾರಿಗಳ ಮುಖ ಶೀಘ್ರದಲ್ಲೇ ಬಯಲಾಗಲಿದೆ’ ಎಂದು ಜಾವಡೇಕರ್‌ ಹೇಳಿದರು.

ದೀಪಿಕಾ ಸಿನಿಮಾ ಬಹಿಷ್ಕಾರಕ್ಕೆ ಕರೆ

ನಟಿ ದೀಪಿಕಾ ಪಡುಕೋಣೆ ಅವರು ಆಯಿಷಿ ಘೋಷ್‌
ಅವರನ್ನು ಭೇಟಿಮಾಡಿ ಬೆಂಬಲ ಸೂಚಿಸಿದರು

ನಟಿ ದೀಪಿಕಾ ಪಡುಕೋಣೆ ಅವರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಮಂಗಳವಾರ ಸಂಜೆ ಭೇಟಿಮಾಡಿ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಅವರೂ ಅಲ್ಲಿದ್ದರು. ಈ ಬೆಳವಣಿಗೆಯು ವಿವಾದ ಸೃಷ್ಟಿಸಿದೆ.

‘ಟುಕಡೆ–ಟುಕಡೆ ಗ್ಯಾಂಗ್‌ ಹಾಗೂ ಅಫ್ಜಲ್‌ ಗ್ಯಾಂಗ್‌’ಗೆ ಬೆಂಬಲ ಸೂಚಿಸಿರುವ ಈ ನಟಿಯ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಬಿಜೆಪಿ ದೆಹಲಿ ಘಟಕದ ವಕ್ತಾರ ಜಿತೇಂದ್ರಪಾಲ್‌ ಸಿಂಗ್‌ ಬಗ್ಗ ಅವರು ಟ್ವೀಟ್‌ ಮೂಲಕ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT