ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಭಾರತೀಯ ಪತ್ರಕರ್ತ ಉಪಸ್ಥಿತಿಗೆ ಅನುವು: ಭಾರತದ ವಿಶ್ವಾಸ

Last Updated 6 ಏಪ್ರಿಲ್ 2023, 17:06 IST
ಅಕ್ಷರ ಗಾತ್ರ

ನವದೆಹಲಿ/ಬೀಜಿಂಗ್‌: ಚೀನಾದಲ್ಲಿ ಭಾರತೀಯ ಪತ್ರಕರ್ತರ ಉಪಸ್ಥಿತಿಗೆ ಚೀನಾ ಅಧಿಕಾರಿಗಳು ಅನುವು ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಭಾರತ ಗುರುವಾರ ವಿಶ್ವಾಸ ವ್ಯಕ್ತಪಡಿಸಿದೆ.

ರಜಕ್ಕಾಗಿ ಚೀನಾದಿಂದ ಭಾರತಕ್ಕೆ ಆಗಮಿಸಿದ್ದ ಇಬ್ಬರು ಪತ್ರಕರ್ತರ ವೀಸಾಗಳನ್ನು ಚೀನಾ ತಡೆಹಿಡಿದಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅವರು ದೆಹಲಿಯಲ್ಲಿ ಈ ಹೇಳಿಕೆ ನೀಡಿದರು.

‘ಭಾರತದ ನ್ಯಾಯಸಮ್ಮತವಾದ ವೀಸಾಗಳನ್ನು ಹೊಂದಿರುವ ಚೀನಾ ಪತ್ರಕರ್ತರು ಇಲ್ಲಿ ವೃತ್ತಿನಿರತರಾಗಿದ್ದಾರೆ. ಚೀನಾ ಪತ್ರಕರ್ತರು ಇಲ್ಲಿ ವರದಿಗಾರಿಕೆ ಮಾಡುವುದರಲ್ಲಿ ನಮಗೆ ಯಾವ ಸಮಸ್ಯೆಯೂ ಕಂಡುಬಂದಿಲ್ಲ. ಆ ದೃಷ್ಟಿಕೋನದಲ್ಲಿ ಹೇಳುವುದಾದರೆ, ಚೀನಾದಿಂದ ವರದಿಗಾರಿಕೆ ಮಾಡಲು ಭಾರತೀಯ ಪತ್ರಕರ್ತರಿಗೆ ಚೀನಾ ಅಧಿಕಾರಿಗಳು ಅವಕಾಶ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಾವು ಚೀನಾ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ’ ಎಂದರು.

ಪ್ರಕರಣವೇನು?: ‘ದಿ ಹಿಂದು’ ಪತ್ರಿಕೆಯ ವಿಶೇಷ ವರದಿಗಾರ ಅನಂತ್‌ ಕೃಷ್ಣನ್‌, ‘ಪ್ರಸಾರ ಭಾರತಿಯ’ ವಿಶೇಷ ವರದಿಗಾರ ಆಯುಷ್ಮಾನ್‌ ಮಿಶ್ರಾ ಅವರು ರಜಾ ಅವಧಿಯಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಅವರ ವೀಸಾಗಳನ್ನು ಚೀನಾ ತಡೆಹಿಡಿದಿದೆ. ಅಲ್ಲದೇ, ಮುಂದಿನ ಆದೇಶ ಬರುವವರೆಗೂ ಭಾರತದಲ್ಲೇ ಇರುವಂತೆ ಮಂಗಳವಾರ ಅವರಿಗೆ ಸೂಚಿಸಿದೆ.

ಈ ನಡೆಯನ್ನು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್‌ ಸಮರ್ಥಿಸಿಕೊಂಡಿದ್ದಾರೆ, ‘ಚೀನಾ ಪತ್ರಕರ್ತರಿಗೆ ಭಾರತದಲ್ಲಿ ಬಹುದಿನಗಳ ಕಾಲ ಅಹಿತಕರ ಮತ್ತು ತಾರತಮ್ಯದ ವರ್ತನೆ ತೋರಲಾಯಿತು. 2017ರಲ್ಲಿ ಚೀನಾ ಪತ್ರಕರ್ತರ ವೀಸಾ ಅವಧಿಯನ್ನು ಭಾರತವು ಮೂರು ತಿಂಗಳಿನಿಂದ 1 ತಿಂಗಳಿಗೆ ಇಳಿಸಿತ್ತು. 2020ರಲ್ಲಿ ಭಾರತಕ್ಕೆ ತೆರಳಲು ಚೀನಾ ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯನ್ನು ಭಾರತ ತಿರಸ್ಕರಿಸಿತ್ತು’ ಎಂದು ಅವರು ಚೀನಾ ಮಾಧ್ಯಮಗಳ ಎದುರು ಹೇಳಿದ್ದಾರೆ.

ಜೊತೆಗೆ, ‘ಭಾರತವು ತನ್ನ ದೇಶದ ಪತ್ರಕರ್ತರಿಗೆ ಚೀನಾದಿಂದ ನಿರೀಕ್ಷಿಸುತ್ತಿರುವ ಉಪಚಾರವನ್ನೇ ಭಾರತದಲ್ಲಿಯ ಚೀನಾ ಪತ್ರಕರ್ತರ ವಿಚಾರದಲ್ಲೂ ನಾವು ನಿರೀಕ್ಷಿಸುತ್ತೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT