ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ವಲಸಿಗರ ಬದುಕು ದುಸ್ಥರ: ವರದಿ

ಕನಿಷ್ಠ ಕೂಲಿ: ಕ್ಷೀಣಿಸಿದ ಉದ್ಯೋಗಾವಕಾಶ
Last Updated 18 ಏಪ್ರಿಲ್ 2023, 14:43 IST
ಅಕ್ಷರ ಗಾತ್ರ

ನವದೆಹಲಿ/ಜೌನಾಪುರ (ಉತ್ತರಪ್ರದೇಶ): ದೇಶದಲ್ಲಿ ಆಂತರಿಕ ವಲಸೆ ಹೆಚ್ಚುತ್ತಿದ್ದು, ನೆಮ್ಮದಿಯ ಜೀವನವನ್ನು ಅರಸಿ ಮಹಾನಗರಗಳ ಹಾದಿ ಹಿಡಿದವರ ಬದುಕು ದುಸ್ಥರವಾಗಿದೆ.

ಭಾರತವು ಜಗತ್ತಿನಲ್ಲೇ ಅಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಹಾದಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲೇ ಆಂತರಿಕ ವಲಸೆ ತೀವ್ರಗೊಳ್ಳುತ್ತಿದ್ದು, ಸರ್ಕಾರದ ಎದುರು ಹಲವು ಸವಾಲುಗಳನ್ನು ತಂದಿಟ್ಟಿದೆ. 2011ರ ಅಂಕಿ ಅಂಶಗಳ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 121 ಕೋಟಿ. ಇದರಲ್ಲಿ ಆಂತರಿಕ ವಲಸಿಗರ ಸಂಖ್ಯೆ 45.6 ಕೋಟಿ.

ಭಾರತದ ಜನಸಂಖ್ಯೆಯು ಶೀಘ್ರವೇ 142 ಕೋಟಿಯ ಗಡಿ ದಾಟಲಿದ್ದು, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾವನ್ನು ಹಿಂದಿಕ್ಕುವ ಕಾಲ ಸನ್ನಿಹಿತವಾಗಿದೆ ಎಂದು ವಿಶ್ವಸಂಸ್ಥೆ ಕಳೆದ ವಾರ ಹೇಳಿತ್ತು.

ದೇಶದ ಜನಸಂಖ್ಯೆಯಲ್ಲಿ ಸುಮಾರು ಮೂರನೇ ಎರಡು ಭಾಗದಷ್ಟು ಮಂದಿ 35 ವರ್ಷದೊಳಗಿನವರಾಗಿದ್ದಾರೆ. ಇವರು ಕೆಲಸ ಅರಸಿ ನಗರಗಳತ್ತ ಗುಳೆ ಹೋಗುತ್ತಿದ್ದಾರೆ. ಕಾರ್ಮಿಕ, ಚಾಲಕ, ಸಹಾಯಕ ಹೀಗೆ ಏನೇ ಕೆಲಸ ಸಿಕ್ಕರೂ ಮಾಡಲು ಇವರು ತಯಾರಿರುತ್ತಾರೆ. ಹೀಗೆ ಗುಳೆ ಹೋಗುವವರಲ್ಲಿ ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯದವರ ಸಂಖ್ಯೆಯೇ ಅಧಿಕವಾಗಿದೆ.

‘ವಲಸಿಗರಿಗೆ ಅರ್ಹತೆಗೆ ಅನುಗುಣವಾದ ಕೆಲಸಗಳೇ ಸಿಗುವುದಿಲ್ಲ. ಈಗ ಉದ್ಯೋಗಾವಕಾಶ ಕ್ಷೀಣಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಇವರಿಗೆ ಕಾಯಂ ಕೆಲಸ ದೊರೆಯುವುದು ದೂರದ ಮಾತು. ಸಿಗುವ ಸಂಬಳದಿಂದ ಜೀವನ ನಿರ್ವಹಿಸುವುದೇ ಕಷ್ಟ. ಹೀಗಿರುವಾಗ ಬಾಡಿಗೆ ಮನೆ ಹಿಡಿಯುವುದು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಅಸಾಧ್ಯ’ ಎಂದು ದೆಹಲಿಯ ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌ನ ತಜ್ಞೆ ಮುಕ್ತಾ ನಾಯಕ್‌ ಹೇಳಿದ್ದಾರೆ.

ನಗರಗಳಿಗೆ ವಲಸೆ ಬರುವವರು ಕಡಿಮೆ ಕೂಲಿ ಹಾಗೂ ಕೆಲಸ ಸಿಗುವುದೇ ಕಷ್ಟ ಎಂಬಂತಹ ಪರಿಸ್ಥಿತಿಯಿಂದಾಗಿ ನೆಲೆ ಕಂಡುಕೊಳ್ಳುವುದಕ್ಕಾಗಿಯೇ ಪರದಾಡುವಂತಾಗಿದೆ. ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಹಲವರು ನಗರದ ಕೊಳೆಗೇರಿಗಳಲ್ಲಿನ ಅತಿರೇಕದ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ.

‘17ನೇ ವಯಸ್ಸಿನಲ್ಲಿ ಊರು ಬಿಟ್ಟು ಚೆನ್ನೈ, ಹೈದರಾಬಾದ್‌ ಮತ್ತು ಮುಂಬೈಯಂತಹ ನಗರಗಳಲ್ಲಿ ಕೆಲಸ ಮಾಡಿದೆ. ಅಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟವಾಯಿತು. ಹೀಗಾಗಿ ಬೆಂಗಳೂರಿಗೆ ಬಂದು ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲ್ಲೂ ಕೂಡ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಹೆಂಡತಿ ಮತ್ತು ಮಕ್ಕಳನ್ನು ಊರಿಗೆ ಕಳುಹಿಸಿದ್ದೇನೆ. ನನಗೆ ಸಿಗುವ ಸಂಬಳದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದೂ ಕಷ್ಟಕರವಾಗಿದೆ’ ಎಂದು ಅಸ್ಸಾಂನ ಅಬ್ದುಲ್‌ ನೂರ್‌ ಅಳಲು ತೋಡಿಕೊಂಡಿದ್ದಾರೆ.

ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ವಲಸೆ ಕಾರ್ಮಿಕರ ಪಾಲು ಶೇ 10ರಷ್ಟಿದೆ. ಇವರು ವಿವಿಧ ವಲಯಗಳ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಕಾರ್ಮಿಕ ಒಕ್ಕೂಟವು 2020ರಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT