ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಗುಡಿ; ಪರಿಣಾಮ ಅನಾಹುತಕಾರಿ: ದೆಹಲಿ ಹೈಕೋರ್ಟ್

Published 1 ಜೂನ್ 2024, 13:04 IST
Last Updated 1 ಜೂನ್ 2024, 13:04 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಯೊಬ್ಬ ಸಾಧುವಿಗೆ, ಬಾಬಾಗೆ ಮತ್ತು ಗುರುವಿಗೆ ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ಅಥವಾ ಸಮಾಧಿ ಸ್ಥಳ ನಿರ್ಮಿಸಲು ಅವಕಾಶ ಕಲ್ಪಿಸಿ, ಆ ಸ್ಥಳವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಟ್ಟರೆ ಪರಿಣಾಮಗಳು ಅನಾಹುತಕಾರಿ ಆಗಿರುತ್ತವೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಇಂತಹ ಅವಕಾಶ ಕಲ್ಪಿಸಿದರೆ ಸಾರ್ವಜನಿಕ ಹಿತವು ಅಪಾಯಕ್ಕೆ ಸಿಲುಕುತ್ತದೆ ಎಂದು ಕೂಡ ಅದು ಹೇಳಿದೆ. ಶಿವನ ಭಕ್ತರಾಗಿರುವ ನಾಗಾ ಸಾಧುಗಳು ಲೌಕಿಕ ಸಂಗತಿಗಳ ವಿಚಾರವಾಗಿ ಸಂಪೂರ್ಣವಾಗಿ ನಿರ್ಮೋಹಿಗಳಾಗಿರಬೇಕು. ಅವರು ತಮ್ಮ ಹೆಸರಿನಲ್ಲಿ ಆಸ್ತಿ ಹಕ್ಕು ಇರಬೇಕು ಎಂದು ಬಯಸುವುದು ಅವರದೇ ನಂಬಿಕೆಗಳು ಹಾಗೂ ಆಚರಣೆಗಳಿಗೆ ಅನುಗುಣವಾಗಿಲ್ಲ ಎಂದು ಹೈಕೋರ್ಟ್ ವಿವರಿಸಿದೆ.

ನ್ಯಾಯಮೂರ್ತಿ ಧರ್ಮೇಶ್ ಶರ್ಮ ಅವರ ಏಕಸದಸ್ಯ ಪೀಠವು ಈ ಮಾತು ಹೇಳಿದೆ. ಇಲ್ಲಿನ ತ್ರಿವೇಣಿ ಘಾಟ್‌ನಲ್ಲಿ ಇರುವ ನಾಗಾ ಬಾಬಾ ಭೋಲ ಗಿರಿ ಅವರ ಗುಡಿಯ ಗಡಿಯನ್ನು ಗುರುತಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಸೂಚಿಸಬೇಕು ಎಂದು ಕೋರಿ ಮಹಂತ ನಾಗಾ ಬಾಬಾ ಶಂಕರ್ ಗಿರಿ ಅವರು ತಮ್ಮ ಉತ್ತರಾಧಿಕಾರಿಯ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಶರ್ಮ ಈ ಮಾತು ಹೇಳಿದ್ದಾರೆ.

ದೆಹಲಿ ವಿಶೇಷ ಕಾನೂನುಗಳ ಕಾಯ್ದೆಯು 2006ರ ಕಾಲಮಿತಿಯನ್ನು ನಿಗದಿ ಮಾಡುವ ಮೊದಲೇ ತಾವು ಈ ಜಾಗವನ್ನು ಅಧೀನದಲ್ಲಿ ಇರಿಸಿಕೊಂಡಿದ್ದಾಗಿ ಅರ್ಜಿದಾರರು ಹೇಳಿದ್ದಾರೆ.

ಈ ಪ್ರದೇಶದ ಹಲವು ಕಟ್ಟಡಗಳನ್ನು ದೆಹಲಿ ಸರ್ಕಾರದ ನೆರೆ ನಿಯಂತ್ರಣ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು 2023ರ ಫೆಬ್ರುವರಿಯಲ್ಲಿ ಧ್ವಂಸಗೊಳಿಸಿದರು. ಹೀಗಾಗಿ, ಗುಡಿಯನ್ನು ಕೂಡ ಧ್ವಂಸಗೊಳಿಸಬಹುದು ಎಂಬ ಆತಂಕ ತಮ್ಮನ್ನು ಕಾಡುತ್ತಿದೆ ಎಂದು ಅರ್ಜಿದಾರರು ಹೇಳಿದ್ದರು.

ಅರ್ಜಿಯಲ್ಲಿ ಹುರುಳಿಲ್ಲ ಎಂದು ಹೇಳಿರುವ ನ್ಯಾಯಪೀಠವು, ಈ ಸ್ಥಳವನ್ನು ಸ್ವಾಧೀನದಲ್ಲಿ ಇರಿಸಿಕೊಳ್ಳುವ ಯಾವುದೇ ಹಕ್ಕು ಅರ್ಜಿದಾರರಿಗೆ ಇಲ್ಲ ಎಂದು ಹೇಳಿದೆ. ‘ಅರ್ಜಿದಾರರು ಸ್ಥಳವನ್ನು ಅತಿಕ್ರಮಿಸಿಕೊಂಡಿದ್ದಾರೆ. ಅವರು ಸ್ಥಳವನ್ನು ಮೂವತ್ತು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಬಳಕೆ ಮಾಡುತ್ತಿದ್ದಾರೆ ಎಂದಮಾತ್ರಕ್ಕೆ ಅವರಿಗೆ ಕಾನೂನಿನ ಅಡಿ ಯಾವುದೇ ಹಕ್ಕು ಲಭ್ಯವಾಗುವುದಿಲ್ಲ’ ಎಂದು ‍ಪೀಠವು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT