ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ | 370 ನೇ ವಿಧಿಯಿಂದ ಸ್ಥಾನಗಳವರೆಗೆ

Published 21 ಏಪ್ರಿಲ್ 2024, 5:02 IST
Last Updated 21 ಏಪ್ರಿಲ್ 2024, 5:02 IST
ಅಕ್ಷರ ಗಾತ್ರ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿದ ನಂತರ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಇದು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿರುವ ಜಮ್ಮು ಕಾಶ್ಮೀರ ಮತ್ತು ಲಡಾಖ್ ಮೇಲಷ್ಟೇ ಅಲ್ಲ, ದೇಶದಾದ್ಯಂತ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದೆ. ಬಿಜೆಪಿಯು ಈ ಬಗ್ಗೆ ಚುನಾವಣಾ ಸಂಕಥನವನ್ನು ಕಟ್ಟುತ್ತಿದ್ದು, ಅದರ ಸಂಪೂರ್ಣ ಲಾಭ ಪಡೆಯುವ ಹವಣಿಕೆಯಲ್ಲಿದೆ. 

ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರ ಅಭಿವೃದ್ಧಿ ಕಾಣುತ್ತಿದೆ ಎಂದು ದೇಶದ ಜನರನ್ನು ನಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾಗುವ ಕೆಲವೇ ದಿನಗಳ ಮುಂಚೆ ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ₹32 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜತೆಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು.

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ), ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್‌ (ಎನ್‌ಸಿ) ತಮ್ಮ ರಾಜಕೀಯ ಲಾಭಕ್ಕಾಗಿ ವಿಶೇಷ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದವು, ಬಿಜೆಪಿಯು ಅದನ್ನು ತೆಗೆದೊಗೆದು ಜಮ್ಮು ಕಾಶ್ಮೀರವನ್ನು ಇತರೆ ಭಾರತದೊಂದಿಗೆ ಬೆಸೆದಿದೆ ಎಂದು ಕೇಸರಿ ಪಾಳಯ ಪ್ರಚಾರ ಮಾಡುತ್ತಿದೆ. ಸಿಎಎ, ರಾಮಮಂದಿರ ನಿರ್ಮಾಣದ ಜತೆಗೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವುದು ಮೋದಿ ಸರ್ಕಾರದ ಭರವಸೆಯಾಗಿತ್ತು; ನಾವು ಅದನ್ನು ಈಡೇರಿಸಿದ್ದೇವೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಅದು ಕೇವಲ ಒಂದು ರಾಜ್ಯದ ವಿಚಾರವಲ್ಲ, ಭಾರತದ ಸಮಗ್ರತೆಗೆ ಸಂಬಂಧಿಸಿದ ವಿಚಾರ ಎನ್ನುವುದನ್ನು ಬಿಜೆಪಿ ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ. 

ಬಿಜೆಪಿಯು ಮೊದಲಿನಿಂದಲೂ 370ನೇ ವಿಧಿಯನ್ನು ಕಾಂಗ್ರೆಸ್ ಪಕ್ಷದೊಂದಿಗೆ ಸಮೀಕರಿಸುತ್ತಲೇ ಬರುತ್ತಿದೆ. ಕಾಶ್ಮೀರ ಸಮಸ್ಯೆಯ ಹುಟ್ಟಿಗೆ ನೆಹರೂ ಅವರೇ ಕಾರಣ ಎನ್ನುವುದು ಪಕ್ಷದ ಹಳೆಯ ವಾದ. ಅದನ್ನು ಬಿಜೆಪಿ ನಾಯಕರು ಸಮಯ ಸಿಕ್ಕಾಗಲೆಲ್ಲ ಪುನರುಚ್ಚರಿಸುತ್ತಲೇ ಬರುತ್ತಿದ್ದಾರೆ. ನೆಹರೂ ಮಾಡಿದ ‘ಪ್ರಮಾದ’ವನ್ನು ಮೋದಿ ಸರಿಪಡಿಸಿದ್ದಾರೆ ಎನ್ನುವುದು ಅದರ ಈಗಿನ ಪ್ರಚಾರದ ತಿರುಳು. 

‘ನಾವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವನ್ನು ರದ್ದುಪಡಿಸಿದ್ದೇವೆ. ಆದ್ದರಿಂದ ದೇಶದ ಜನ ಬಿಜೆಪಿಗೆ 370 ಮತ್ತು ಎನ್‌ಡಿಎಗೆ 400 ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರುವರಿಯಲ್ಲಿ ಹೇಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗುರಿಯಾದ 370 ಸ್ಥಾನ ಬಂದಿದ್ದೇ 370ನೇ ವಿಧಿಯಿಂದ ಎನ್ನುವುದನ್ನು ಶಾ ಅವರ ಮಾತು ಸ್ಪಷ್ಟಪಡಿಸಿತ್ತು.   

ಬಿಜೆಪಿಯ ಚುನಾವಣಾ ಕಣದಲ್ಲಿ 370ನೇ ವಿಧಿ ಬಗ್ಗೆ ಪ್ರಸ್ತಾಪಿಸುತ್ತಿರುವ ಭರಾಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದ್ದರು. ಅದಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅಮಿತ್ ಶಾ, ರಾಜನಾಥ್ ಸಿಂಗ್ ಮುಂತಾದವರು ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ‘ಕಾಶ್ಮೀರ ನಮ್ಮದಲ್ಲವೇ’ ಎಂದು ಪ್ರಶ್ನಿಸಿದ್ದ ಶಾ, ‘ಮೊರಾದಾಬಾದ್‌ನ ಪ್ರತಿ ಮಗುವೂ ಕಾಶ್ಮೀರಕ್ಕಾಗಿ ಜೀವ ಬಿಡಲು ಸಿದ್ಧವಿದೆ’ ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ್ದರು. ಇದೇ ಬಿರುಸಿನಲ್ಲಿಯೇ ಬಿಜೆಪಿ ಜಮ್ಮು ಕಾಶ್ಮೀರದ ವಿಚಾರವನ್ನು ‘ಲೋಕಾ’ ಕಣದಲ್ಲಿ ಪ್ರಸ್ತಾಪಿಸುತ್ತಿದೆ.         

ಜನಸಂಘ ಕಾಲದ ಕಾರ್ಯಸೂಚಿ

1951ರಲ್ಲಿ ಜನಸಂಘ ಜನ್ಮ ತಳೆದ ಗಳಿಗೆಯಿಂದಲೂ ಏಕರೂಪ ನಾಗರಿಕ ಸಂಹಿತೆ, ಗೋ ಹತ್ಯಾ ನಿಷೇಧದ ಜತೆಗೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವುದು ಕೇಸರಿ ಪಾಳಯದ ಪ್ರಮುಖ ಕಾರ್ಯಸೂಚಿಯಾಗಿತ್ತು. ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ 370ನೇ ವಿಧಿ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ 1953ರಲ್ಲಿ ಜಮ್ಮು ಕಾಶ್ಮೀರದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಅದನ್ನು ‘ಬಲಿದಾನ’ ಎಂದೇ ಪ್ರಚಾರ ಮಾಡತೊಡಗಿದ ಬಿಜೆಪಿ, ವಿಶೇಷ ಸ್ಥಾನಮಾನ ರದ್ದತಿಯನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣದಷ್ಟೇ ಪ್ರಮುಖ ವಿಚಾರ ವನ್ನಾಗಿಸಿಕೊಂಡಿತು. 

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಮತ್ತು ಬಾವುಟ ಇದ್ದ ಬಗ್ಗೆ ದೇಶದ ಒಂದು ವರ್ಗದಲ್ಲಿ ಅಸಹನೆ ಇತ್ತು. ಅದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡದ್ದು ಬಿಜೆಪಿ. 1992ರಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿ ಶ್ರೀನಗರದ ಲಾಲ್‌ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರು. 2014 ಮತ್ತು 2019ರ ಚುನಾವಣೆಗಳಲ್ಲಿಯೂ 370ನೇ ವಿಧಿ ಬಿಜೆಪಿ ಪ್ರಣಾಳಿಕೆಯಲ್ಲಿ ಮುಖ್ಯ ಸ್ಥಾನ ಪಡೆದಿತ್ತು. ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸಿದ್ದೇವೆ ಎಂದು ಪಕ್ಷವು ಈಗ ಅದರ ಮೇಲೆ ಮತ ಯಾಚನೆ ಮಾಡುತ್ತಿದೆ. ‘ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡುವ ಧೈರ್ಯ ಮಾಡಬೇಡಿ’ ಎಂದು ಅಮಿತ್ ಶಾ ಮೊನ್ನೆ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದರು. ಇದೂ ಒಂದು ರೀತಿಯ ಪ್ರಚಾರ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.

‌ಆರು ಕ್ಷೇತ್ರ, ನಾಲ್ಕು ಪಕ್ಷ

ಜಮ್ಮು ಕಾಶ್ಮೀರ, ಲಡಾಖ್‌ನಲ್ಲಿ ಆರು ಲೋಕಸಭಾ ಕ್ಷೇತ್ರಗಳಿದ್ದು, ಒಂದೊಂದು ಕ್ಷೇತ್ರದ ಚುನಾವಣೆ ಒಂದೊಂದು ಹಂತದಲ್ಲಿ ನಡೆಯುತ್ತಿದೆ. 2019ರಲ್ಲಿ ಮೂರರಲ್ಲಿ ಎನ್‌ಸಿ, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಉಧಮ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜಾ ಹರಿಸಿಂಗ್ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ ಅವರನ್ನು ಭಾರಿ ಅಂತರದಿಂದ ಸೋಲಿಸುವ ಮೂಲಕ ಜಿತೇಂದ್ರ ಸಿಂಗ್ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಈ ಬಾರಿಯೂ ಜಿತೇಂದ್ರ ಸಿಂಗ್ ಉಧಮ್‌ಪುರದಿಂದ ಕಣಕ್ಕಿಳಿದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ‘ಇಂಡಿಯಾ’ ಕೂಟದ ಮಿತ್ರ ಪಕ್ಷಗಳಾದ ಎನ್‌ಸಿ ಹಾಗೂ ಕಾಂಗ್ರೆಸ್ ಸ್ಥಾನ ಹೊಂದಾಣಿಕೆ ಮಾಡಿಕೊಂಡಿವೆ. ಪಿಡಿಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. 

ರಾಜ್ಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬಿಜೆಪಿ ಸರ್ಕಾರವು ವಿಶೇಷ ಸ್ಥಾನಮಾನ ರದ್ದು ಮಾಡಿದೆ ಎಂಬುದನ್ನೇ ವಿಪಕ್ಷಗಳು ಚುನಾವಣಾ ವಿಷಯವನ್ನಾಗಿಸಿಕೊಂಡು ಜನರನ್ನು ಸೆಳೆಯಲು ನೋಡುತ್ತಿವೆ. ಬಿಜೆಪಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದು, ಬಂಡವಾಳ ಹೂಡಿಕೆ, ಉದ್ದಿಮೆಗಳ ಸ್ಥಾಪನೆಯಿಂದ ಜಮ್ಮು ಕಾಶ್ಮೀರದ ಚಹರೆಯೇ ಬದಲಾಗಲಿದೆ ಎಂದು ಭರವಸೆ ನೀಡುತ್ತಿದೆ. ಇವರ ನಡುವೆ ಲಡಾಖ್ ಅನ್ನು ಸಂವಿಧಾನದ ಆರನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು, ಹಿಮಾಲಯದ ಪರಿಸರ ಉಳಿಸಬೇಕು ಎಂದು ಒತ್ತಾಯಿಸಿರುವ ಸೋನಮ್ ವಾಂಗ್ಚುಕ್ ಅವರಂಥವರ ಹೋರಾಟ ಯಾವ ಪಕ್ಷಕ್ಕೂ ಚುನಾವಣೆಯ ವಿಚಾರವೇ ಆಗಿಲ್ಲ.

ಚುನಾವಣಾ ಕಣದಲ್ಲಿ ಸುಳ್ಳುಗಳ ಭರಾಟೆ

ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡಿದ್ದಕ್ಕೆ ಒಂದು ಚಾರಿತ್ರಿಕ ಹಿನ್ನೆಲೆ ಇದೆ. ಪ್ರಾಂತ್ಯವು ಭಾರತದಲ್ಲಿ ವಿಲೀನಗೊಳ್ಳುವ ಕಾಲಕ್ಕೆ ಅಲ್ಲಿನ ರಾಜರಿಗೆ ನೀಡಿದ್ದ ಮಾತಿನಂತೆ ಸಂವಿಧಾನ ಬದ್ಧವಾಗಿಯೇ ನೀಡಲಾಗಿದ್ದ ಸವಲತ್ತು ಅದು. ಆದರೆ, ಪ್ರಜ್ಞಾಪೂರ್ವಕವಾಗಿ ಆ ಹಿನ್ನೆಲೆಯನ್ನು ಬದಿಗಿಟ್ಟು ಕಾಶ್ಮೀರ ಸಮಸ್ಯೆಯ ಸುತ್ತ ಸುಳ್ಳುಗಳ ಮಹಾ ಸಾಗರವನ್ನೇ ಸೃಷ್ಟಿಸಲಾಗಿದೆ. ಚುನಾವಣೆ ಸಮಯದಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ದೊಡ್ಡ ಮಟ್ಟದಲ್ಲಿಯೇ ಸುಳ್ಳುಗಳು ಹರಿದಾಡುತ್ತಿವೆ. 

ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಾಶ್ಮೀರ ಪ್ರಾಂತ್ಯದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎನ್ನುವುದೂ ಸೇರಿದಂತೆ ವಾಸ್ತವಕ್ಕೆ ವಿರುದ್ಧವಾದ ಅನೇಕ ವಿಚಾರಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಚುನಾವಣೆಯಲ್ಲಿ ಅವು ಕೂಡ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT