ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ ಜೆಡಿಯು ಮುಖಂಡನ ಹತ್ಯೆ: ಶಸ್ತ್ರಸಜ್ಜಿತರಾಗಿ ಬಂದ ಅಪರಿಚಿತರಿಂದ ಕೃತ್ಯ

Published 3 ಜೂನ್ 2024, 14:22 IST
Last Updated 3 ಜೂನ್ 2024, 14:22 IST
ಅಕ್ಷರ ಗಾತ್ರ

ನಳಂದ: ಬಿಹಾರದ ನಳಂದ ಜಿಲ್ಲೆಯಲ್ಲಿ ಸೋಮವಾರ ನಸುಕಿನ 4.30ರ ಸುಮಾರಿಗೆ ಜೆಡಿಯು ಮುಖಂಡ ಅನಿಲ್ ಕುಮಾರ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮುವಾ ಎಂಬ ಗ್ರಾಮದಲ್ಲಿ ಅನಿಲ್ ಕುಮಾರ್ ಅವರು ವಾಯುವಿಹಾರಕ್ಕೆ ಹೋಗಿದ್ದರು. ಈ ವೇಳೆ ಶಸ್ತ್ರಸಜ್ಜಿತವಾಗಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಮೊದಲು ಅವರ ಮೇಲೆ ಹಲ್ಲೆ ನಡೆಸಿ, ಆ ಬಳಿಕ ಚೂಪಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಜೂನ್ 1ರಂದು ಬಿಹಾರದಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಇವರು ಜೆಡಿಯು ಪಕ್ಷದ ಪೋಲಿಂಗ್ ಏಜೆಂಟ್ ಆಗಿದ್ದರು ಎಂದು ಪೊಲೀಸರು ತಿಳಿಸಿದರು. 

ಮತದಾನದ ದಿನವೂ ಜೆಡಿಯು ಮತ್ತು ಪ್ರತಿಪಕ್ಷಗಳ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿತ್ತು. ಆದರೆ, ಅನಿಲ್ ಅವರ ಕೊಲೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಶ್ರವಣ್ ಕುಮಾರ್, ‘ಈ ಹತ್ಯೆಯು ಆಘಾತಕಾರಿ ಮತ್ತು ಖಂಡನಾರ್ಹ. ನಮ್ಮ ಪೋಲಿಂಗ್ ಏಜೆಂಟ್ ಅವರ ಹತ್ಯೆಯು ಪ್ರತಿಪಕ್ಷಗಳ ವಿಶೇಷವಾಗಿ ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ಲಿಬರೇಷನ್ ಸೋಲುವ ಭೀತಿಯಿಂದ ಹಿಂಸಾಚಾರದಲ್ಲಿ ತೊಡಗಿಕೊಂಡಿರುವುದನ್ನು ಸಾಬೀತುಪಡಿಸುತ್ತದೆ. ಈ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕು. ಜೊತೆಗೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಇದು ಬಿಹಾರದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮೂರನೇ ಹಿಂಸಾಚಾರ ಘಟನೆಯಾಗಿದೆ. ಮೊದಲಿಗೆ ಮತದಾನ ನಡೆಯುತ್ತಿದ್ದ ಮೇ 20ರಂದು ಸರಣ್ ಲೋಕಸಭಾ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿಯಾದ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಮತ್ತು  ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿತ್ತು. ಇದರ ಮಾರನೇ ದಿನ ಗಲಾಟೆ ತೀವ್ರಗೊಂಡು, ಗುಂಡಿನ ದಾಳಿಯೂ ನಡೆದಿತ್ತು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಮೂವರು ಗಾಯಗೊಂಡಿದ್ದರು. 

ಜೂನ್ 1ರಂದು ಕೇಂದ್ರದ ಮಾಜಿ ಸಚಿವ ಹಾಗೂ ಪಾಟಲೀಪುತ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ ಕೃಪಾಲ್ ಯಾದವ್ ಅವರ ಮೇಲೆ ಗ್ರಾಮೀಣ ಪಟ್ನಾದಲ್ಲಿ ದಾಳಿ ನಡೆದಿತ್ತು. ಕೃಪಾಲ್ ಬೆಂಬಲಿಗರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT