ರಾಂಚಿ: ಯಾವ ಮಾನದಂಡಗಳ ಅಡಿಯಲ್ಲಿ ರಾಜ್ಯದಾದ್ಯಂತ ಹಲವು ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಿದ್ದೀರಿ ಎಂದು ಸರ್ಕಾರವನ್ನು ಶನಿವಾರ ಪ್ರಶ್ನಿಸಿರುವ ಜಾರ್ಖಂಡ್ ಹೈಕೋರ್ಟ್, ಪ್ರತಿಕ್ರಿಯೆ ದಾಖಲಿಸುವಂತೆ ನಿರ್ದೇಶನ ನೀಡಿದೆ.
ಶನಿವಾರ (ಸೆ.21) ಐದು ಗಂಟೆಗೂ ಹೆಚ್ಚು ಸಮಯ ಇಂಟರ್ನೆಟ್ ನಿರ್ಬಂಧಿಸಲಾಗಿದೆ ಎಂದು ಜಾರ್ಖಂಡ್ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ರಾಜೇಂದ್ರ ಕೃಷ್ಣ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆನಂದ ಸೇನ್ ಮತ್ತು ಅನುಭಾ ರಾವತ್ ಚೌಧರಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಸೆಪ್ಟೆಂಬರ್ 21 ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರ ವರೆಗೆ ಇಂಟರ್ನೆಟ್ ಸ್ಥಗಿತಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಉಲ್ಲೇಖಿಸಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದರು.
ಜಾರ್ಖಂಡ್ ಸಾಮಾನ್ಯ ಪದವಿ ಮಟ್ಟದ ಸಂಯೋಜಿತ ಸ್ಪರ್ಧಾತ್ಮಕ ಪರೀಕ್ಷೆ (ಜೆಜಿಜಿಎಲ್‌ಸಿಸಿಇ) ಕಾರಣದಿಂದಾಗಿ ಸೆಪ್ಟೆಂಬರ್ 22ರಂದೂ ಇಂಟರ್ನೆಟ್ ಸ್ಥಗಿತ ಕ್ರಮ ಮುಂದುವರಿಯಲಿದೆ ಎಂಬುದಾಗಿಯೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, 4 ವಾರಗಳಲ್ಲಿ ಪ್ರತಿಕ್ರಿಯೆ ದಾಖಲಿಸುವಂತೆ ನಿರ್ದೇಶನ ನೀಡಿದೆ. ಆದರೆ, ಇಂದು (ಸೆ.22) ಇಂಟರ್ನೆಟ್ ಸ್ಥಗಿತಗೊಳಿಸುವ ಸರ್ಕಾರದ ಕ್ರಮವನ್ನು ನಿರ್ಬಂಧಿಸಿಲ್ಲ.
ಇಂಟರ್ನೆಟ್ ಸ್ಥಗಿತ ಕ್ರಮದಿಂದಾಗಿ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ವ್ಯವಹಾರಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ಕೃಷ್ಣ ವಾದ ಮಂಡಿಸಿದರು.