ನವದೆಹಲಿ: ವಿದ್ಯಾರ್ಥಿವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜವಾಹರಲಾಲ್ ನೆಹರೂ (ಜೆಎನ್‌ಯು) ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಸದಸ್ಯರು ಶುಕ್ರವಾರ ಶಿಕ್ಷಣ ಸಚಿವಾಲಯಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆದರೆ ಪ್ರತಿಭಟನಕಾರರನ್ನು ಪೊಲೀಸರು ಕ್ಯಾಂಪಸ್‌ನ ಹೊರಭಾಗದಲ್ಲೇ ತಡೆದರು.
ವಿಶ್ವವಿದ್ಯಾಲಯದ ಆವರಣದಿಂದ ವಿದ್ಯಾರ್ಥಿಗಳು ಹೊರಹೋಗದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್ ಹಾಕಲಾಗಿತ್ತು. ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.
ಅಡೆತಡೆ ದಾಟಿದ ಪ್ರತಿಭಟನೆನಿರತ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಅರ್ಧ ಕಿ.ಮೀ. ದೂರ ಮೆರವಣಿಗೆ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಪೊಲೀಸರು ಪ್ರತಿಭಟನಾ ಜಾಥಾವನ್ನು ತಡೆದರು. ವಿದ್ಯಾರ್ಥಿಗಳು ಬ್ಯಾರಿಕೇಡ್ ಮುರಿದು ಮುನ್ನುಗ್ಗಲು ಯತ್ನಿಸಿದರು. ಈ ಸಂದರ್ಭ ಪೊಲೀಸರು–ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ.
ವಿಶ್ವವಿದ್ಯಾಲಯ ಆವರಣದ ಹೊರಭಾಗದಲ್ಲಿ ಪ್ರತಿಭಟಿಸಲು, ಮೆರವಣಿಗೆ ನಡೆಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಿಲ್ಲ. ಕ್ಯಾಂಪಸ್‌ನಿಂದ ಹೊರಬಂದರೆ ತಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು.