ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಚ್ಛೇ ದಿನ್‌ ಬರಲಿದೆ, ಪ್ರಧಾನಿ ಮೋದಿ ನಿರ್ಗಮಿಸುತ್ತಾರೆ: ಸಿಎಂ ಕೇಜ್ರಿವಾಲ್‌

Published 21 ಮೇ 2024, 3:10 IST
Last Updated 21 ಮೇ 2024, 3:10 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೇಶದಲ್ಲಿ ಒಳ್ಳೆಯ ದಿನ ಬರಲಿದೆ ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿಸುತ್ತಾರೆ ಎಂದು ಹೇಳಿದ್ದಾರೆ.

ಪೂರ್ವ ದೆಹಲಿಯ ಗಾಂಧಿ ನಗರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ರಚನೆಯಾಗುವುದಿಲ್ಲ. ಅವರ ಆಡಳಿತಾವಧಿಯಲ್ಲಿನ ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಜನರು ಬಿಜೆಪಿ ಮೇಲೆ ಕೋಪಗೊಂಡಿದ್ದಾರೆ. ಜನರು ಅವರ ಪಕ್ಷವನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ. ಜೂನ್‌ 4ರಂದು ಒಳ್ಳೆಯ ದಿನ ಬರಲಿದೆ ಏಕೆಂದರೆ ಪ್ರಧಾನಿ ಮೋದಿ ಅವರು ನಿರ್ಗಮಿಸುತ್ತಾರೆ’ (ಅಚ್ಛೇ ದಿನ್ ಆನೇ ವಾಲೇ ಹೈ, ಮೋದಿ ಜೀ ಜಾನೇ ವಾಲೇ ಹೈ) ಎಂದು ಹೇಳಿದ್ದಾರೆ.

ಇಂದು ನಾನು ನನ್ನ ಪತ್ನಿಯನ್ನು ನನ್ನೊಂದಿಗೆ ಕರೆತಂದಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ಅವರು ಎಲ್ಲಾ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ನಾನು ಅವರ ಬಳಿ ದೆಹಲಿ ಜನತೆಯ ಯೋಗಕ್ಷೇಮ ಕುರಿತು ವಿಚಾರಿಸುತ್ತಿದ್ದೆ ಮತ್ತು ನನ್ನ ಸಂದೇಶಗಳನ್ನು ಅವರ ಮೂಲಕ ನಿಮಗೆ ತಿಳಿಸುತ್ತಿದ್ದೆ. ಅವರು ‘ಝಾನ್ಸಿಯ ರಾಣಿ’ಯಂತೆ ಎಂದು ಕೇಜ್ರಿವಾಲ್‌ ಹೊಗಳಿದರು. ಮೊದಲ ಬಾರಿಗೆ ಚುನಾವಣಾ ಸಭೆಯಲ್ಲಿ ಕೇಜ್ರಿವಾಲ್‌ ತಮ್ಮ ಪತ್ನಿಯೊಂದಿಗೆ ಪಾಲ್ಗೊಂಡರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುನೀತಾ ಕೇಜ್ರಿವಾಲ್‌, ‘ನಿಮ್ಮ ಆಶೀರ್ವಾದದಿಂದಲೇ ನನ್ನ ಪತಿ ಇಂದು ನಮ್ಮೊಂದಿಗಿದ್ದಾರೆ, ಯಾರು ಸರಿಯಾದ ಮಾರ್ಗದಲ್ಲಿ ಕೆಲಸ ಮಾಡುತ್ತಾರೋ ಅವರಿಗೆ ದೇವರು ಸಹಾಯ ಮಾಡುತ್ತಾನೆ. ನನ್ನ ಪತಿ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲು ಮೇ 25ರಂದು ಎಎಪಿಗೆ ಮತ ನೀಡಿ’ ಎಂದು ಮನವಿ ಮಾಡಿದರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಜೂನ್‌ 1ರವರೆಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT