ನವದೆಹಲಿ: ‘ನಿಮ್ಮಿಂದ ರಾಜ್ಯ ಸ್ಥಾನಮಾನ ಕಿತ್ತುಕೊಂಡವರಿಗೆ ತಕ್ಕ ಪಾಠ ಕಲಿಸಲು ಇದು ಕೊನೆಯ ಅವಕಾಶವಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಇಂದು ಮೂರನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದೆ.
‘ಮೂರನೇ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರದ 40 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುಂತೆ ಆ ಕ್ಷೇತ್ರಗಳ ಮತದಾರರಿಗೆ ನಾನು ಮನವಿ ಮಾಡುತ್ತೇನೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಖರ್ಗೆ ತಿಳಿಸಿದ್ದಾರೆ.
‘ನಿಮ್ಮಿಂದ (ಜಮ್ಮು ಮತ್ತು ಕಾಶ್ಮೀರದ ಜನತೆ) ರಾಜ್ಯತ್ವವನ್ನು ಕಿತ್ತುಕೊಂಡವರಿಗೆ ಪಾಠ ಕಲಿಸಲು ಇದು ಅಂತಿಮ ಅವಕಾಶವಾಗಿದೆ’ ಎಂದು ಹೇಳಿದರು.
‘ನೆನಪಿಡಿ... ನಿಮ್ಮ ಒಂದೇ ಒಂದು ಮತ ನಿಮ್ಮ ಭವಿಷ್ಯವನ್ನು ಬದಲಾಯಿಸಬಹುದು. ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಖಚಿತಪಡಿಸಲು, ನಿಮ್ಮ ಭೂಮಿಯ ಹಕ್ಕುಗಳನ್ನು ರಕ್ಷಿಸಲು ಮತ್ತು ನಿಮ್ಮ ಸಾಂವಿಧಾನಿಕ ಹಕ್ಕುಗಳನ್ನು ಬಲಪಡಿಸಲು ಈ ಒಂದು ಮತ ಸಾಕು’ ಎಂದು ಹೇಳಿದರು.