ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳ: ಕೊನೆಯ ಪವಿತ್ರ ಸ್ನಾನ ಇಂದು

Last Updated 3 ಮಾರ್ಚ್ 2019, 19:10 IST
ಅಕ್ಷರ ಗಾತ್ರ

ಅಲಹಾಬಾದ್‌ : ಕುಂಭಮೇಳದ ಕೊನೆಯ ಪವಿತ್ರ ಸ್ನಾನ ಮಹಾಶಿವರಾತ್ರಿಯಂದು (ಮಾರ್ಚ್‌ 4) ನಡೆಯಲಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿ ಸಂಗಮ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಲಿದೆ. ಈ ಮೂಲಕ ಅಂದುವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

ಮಕರಸಂಕ್ರಾಂತಿಯಿಂದ (ಜನವರಿ 15) ಆರಂಭವಾದ ಕುಂಭಮೇಳದಲ್ಲಿ ಈವರೆಗೆ 22 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಮೇಳದ ಕೊನೆಯ ದಿನವಾದ ಸೋಮವಾರ ಅಂದಾಜು ಒಂದು ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಹಾಶಿವರಾತ್ರಿಯು ಶಿವನ ಭಕ್ತರಿಗೆ ಅತ್ಯಂತ ಮಹತ್ವದ ದಿನ. ಅಂದು ಶಿವನ ವಿವಾಹ ನಡೆದಿತ್ತು ಎಂಬ ನಂಬಿಕೆ ಇದೆ. ಸ್ವರ್ಗದಲ್ಲಿಯೂ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಆದ್ದರಿಂದ ಅಂದು ಸಂಗಮದಲ್ಲಿ ಸ್ನಾನ ಮಾಡಿ ಮಹಾಶಿವರಾತ್ರಿ ಆಚರಿಸುವುದರಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂಬುವುದು ಭಕ್ತರ ನಂಬಿಕೆಯಾಗಿದೆ’ ಎಂದು ಕುಂಭಮೇಳದಲ್ಲಿ ಸ್ಥಾಪಿಸಿರುವ ರಾಮ ನಾಮ ಬ್ಯಾಂಕ್‌ ಅಧ್ಯಕ್ಷೆ ಗುಂಜನ್‌ ವರ್ಷಣಿ ಹೇಳುತ್ತಾರೆ.

‘ಶಿವನ ಸ್ಮರಣೆಯ ದಿನ ಎಂದೇ ಹೇಳಲಾಗುವ ಸೋಮವಾರವೇ ಕುಂಭಮೇಳದ ಕೊನೆಯ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಅಂದು ಶಿವಲಿಂಗಕ್ಕೆ ರುದ್ರಾಭಿಷೇಕ ಸಹ ನಡೆಯಲಿದೆ’ ಎಂದು ಗೃಹ ನಕ್ಷತ್ರ ಎಂಬ ಶಿಬಿರದ ಅಶುತೋಷ್‌ ವರ್ಷಣಿ ಹೇಳಿದ್ದಾರೆ.

ಈಗಾಗಲೇ ಕುಂಭಮೇಳದಲ್ಲಿ ಮಕರ ಸಂಕ್ರಾಂತಿ (ಜ. 15),ಮೌನಿ ಅಮವಾಸ್ಯೆ (ಫೆಬ್ರುವರಿ 4),ವಸಂತ ಪಂಚಮಿ (ಫೆಬ್ರುವರಿ 10),ಪೌಶ್‌ ಪೂರ್ಣಿಮೆ (ಜ. 21) ಹಾಗೂಮಘಿ ಪೂರ್ಣಿಮೆ (ಫೆ. 19) ದಿನದಂದು ನಡೆದ ಪವಿತ್ರ ಸ್ನಾನದಲ್ಲಿ ಕೋಟ್ಯಾಂತರ ಭಕ್ತರು ಪಾಲ್ಗೊಂಡಿದ್ದರು.

‘ಕುಂಭಮೇಳದ ಕೊನೆಯದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.ಕುಂಭಮೇಳ ಪ್ರದೇಶವನ್ನು 20 ವಲಯಗಳನ್ನಾಗಿ ವಿಂಗಡಿಸಲಾಗಿದೆ. 20,000 ಪೊಲೀಸ್‌ ಸಿಬ್ಬಂದಿ, 6,000 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 3,200 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿರುವ ಕುಂಭಮೇಳಕ್ಕಾಗಿಯೇ 40 ಪೊಲೀಸ್‌ ಠಾಣೆಗಳನ್ನು ಆರಂಭಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಘಟಕದ ಕಮಾಂಡೋಗಳು, ಬಾಂಬ್‌ ನಿಷ್ಕ್ರೀಯ ಘಟಕಗಳು, ಶ್ವಾನದಳವನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಉತ್ತರ ಪ್ರದೇಶದ ಪೊಲೀಸ್‌ ಮಹಾನಿರ್ದೇಶಕ ಒ.ಪಿ.ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT