ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಗ್ನಿದುರಂತ | ಹಚ್ಚೆಯ ಮೂಲಕ ಮಗನ ಮೃತದೇಹ ಗುರುತಿಸಿದ ತಂದೆ

Published 13 ಜೂನ್ 2024, 16:03 IST
Last Updated 13 ಜೂನ್ 2024, 16:03 IST
ಅಕ್ಷರ ಗಾತ್ರ

ಕೋಟಯಂ/ಕೊಲ್ಲಂ: ಅಗ್ನಿದುರಂತದಲ್ಲಿ ಮೃತಪಟ್ಟ 27 ವರ್ಷ ವಯಸ್ಸಿನ ಶ್ರೀಹರಿ ಎನ್ನುವವರ ದೇಹವನ್ನು ಅವರ ತಂದೆ ಪ್ರದೀಪ್ ಅವರು ಗುರುತಿಸಲು ಸಾಧ್ಯವಾಗಿದ್ದು ಒಂದು ಹಚ್ಚೆಯ ಕಾರಣದಿಂದ.

ಆಸ್ಪತ್ರೆಯೊಂದರ ಶವಾಗಾರದಲ್ಲಿ ಶ್ರೀಹರಿ ಅವರ ಮೃತದೇಹ ಇರಿಸಲಾಗಿತ್ತು. ಅವರ ಮೃತದೇಹವನ್ನು ಗುರುತಿಸಲು ತಂದೆ ಪ್ರದೀಪ್ ಅವರನ್ನು ಅಧಿಕಾರಿಗಳು ಕರೆದಿದ್ದರು. ‘ನಾನು ಅಲ್ಲಿಗೆ ಹೋದಾಗ ಮುಖ ಸಂಪೂರ್ಣವಾಗಿ ಊದಿಕೊಂಡಿತ್ತು, ಮೂಗು ಸಂಪೂರ್ಣವಾಗಿ ಕಪ್ಪಾಗಿತ್ತು. ನನಗೆ ಅವನನ್ನು ಗುರುತಿಸಲು ಆಗಲೇ ಇಲ್ಲ’ ಎಂದು ಪ್ರದೀಪ್ ಅವರು ದುಃಖತಪ್ತರಾಗಿ ತಿಳಿಸಿದ್ದಾರೆ.

‘ಮಗನ ಕೈ ಮೇಲೆ ಒಂದು ಹಚ್ಚೆ ಇದೆ ಎಂದು ನಾನು ಹೇಳಿದೆ. ಅದನ್ನು ಆಧರಿಸಿ ನಾನು ಅವನನ್ನು ಗುರುತಿಸಿದೆ’ ಎಂದು ಅವರು ಮಲಯಾಳದ ಸುದ್ದಿವಾಹಿಯೊಂದಕ್ಕೆ ಹೇಳಿದ್ದಾರೆ. ಶ್ರೀಹರಿ ಅವರು ಜೂನ್‌ 5ರಂದು ಕುವೈತ್‌ಗೆ ವಾಪಸ್ಸಾಗಿದ್ದರು.

ತಂದೆ ಮತ್ತು ಮಗ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರದೀಪ್ ಅವರು ಕಳೆದ ಎಂಟು ವರ್ಷಗಳಿಂದ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದ ಶ್ರೀಹರಿ ಮೊದಲು ಒಂದು ಸೂಪರ್‌ಮಾರ್ಕೆಟ್‌ನಲ್ಲಿ ಕೆಲಸ ಮಾಡಿದ್ದರು.

ಮಗಳಿಗೆ ಫೋನ್ ಖರೀದಿಸಿದ್ದರು: ಕೊಲ್ಲಂನ ಲುಕೋಸ್ ಅವರು ತಮ್ಮ ಹಿರಿಯ ಮಗಳಿಗೆ ಒಂದು ಮೊಬೈಲ್‌ ಫೋನ್‌ ಖರೀದಿಸಿದ್ದರು. ಆಕೆ 12ನೆಯ ತರಗತಿಯ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದಿದ್ದಕ್ಕಾಗಿ ಈ ಫೋನ್ ಖರೀದಿಸಿದ್ದ ಅವರು, ಮುಂದಿನ ತಿಂಗಳು ಊರಿಗೆ ಬಂದಾಗ ಅದನ್ನು ಆಕೆಗೆ ನೀಡುವವರಿದ್ದರು. 

ಆದರೆ ಲುಕೋಸ್ ಅವರ ಕುಟುಂಬಕ್ಕೆ ಬುಧವಾರ ಬಂದೆರಗಿದ್ದು, ಲುಕೋಸ್ ಅವರು ಕುವೈತ್‌ನಲ್ಲಿ ವಾಸಿಸುತ್ತಿದ್ದ ಕಟ್ಟಡಕ್ಕೆ ಬೆಂಕಿ ತಗುಲಿದೆ ಎಂಬ ಸುದ್ದಿ. 

ಅಗ್ನಿದುರಂತ ಸಂಭವಿಸಿದಾಗ ಲುಕೋಸ್ ಅವರು ಸ್ಥಳೀಯ ಚರ್ಚ್‌ನ ಪಾದ್ರಿಗೆ ಕರೆ ಮಾಡಿದ್ದರು. ಕರೆ ಕಡಿತವಾಗುವ ಮೊದಲು ತುಸು ಅವಧಿಗೆ ಲುಕೋಸ್ ಮಾತನಾಡಿದ್ದರು. ಲುಕೋಸ್ ‌ಅವರಿಗೆ ತಿರುಗಿ ಕರೆ ಮಾಡಿದಾಗ ಅವರ ಫೋನ್ ರಿಂಗ್ ಆಗುತ್ತಿತ್ತು. ಆದರೆ ಯಾರೂ ಕರೆ ಸ್ವೀಕರಿಸುತ್ತಿರಲಿಲ್ಲ. ಅವರು ಜೀವಂತವಾಗಿದ್ದಾರೆ ಎಂದು ಎಲ್ಲರೂ ನಂಬಿದ್ದರು ಎಂದು ಅವರ ಸಂಬಂಧಿಯೊಬ್ಬರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದರು.

ಆದರೆ, ಪೊಲೀಸರ ಬಳಿ ಸಂಜೆ ವಿಚಾರಿಸಿದಾಗ ಲುಕೋಸ್ ಅವರು ಸತ್ತಿರುವುದು ಖಚಿತವಾಯಿತು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT