ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್‌ ಅಗ್ನಿದುರಂತ: ಮೃತ ಭಾರತೀಯರ ಸಂಖ್ಯೆ 45ಕ್ಕೆ ಏರಿಕೆ

ಮೃತರಲ್ಲಿ ಕೇರಳದವರ ಸಂಖ್ಯೆ 24 | ಐದು ಮಂದಿ ತಮಿಳರು | ಪರಿಹಾರ ಘೋಷಣೆ
Published 13 ಜೂನ್ 2024, 15:22 IST
Last Updated 13 ಜೂನ್ 2024, 15:22 IST
ಅಕ್ಷರ ಗಾತ್ರ

ದುಬೈ/ಕುವೈತ್ ನಗರ: ಕುವೈತ್‌ನಲ್ಲಿ ನಡೆದ ಅಗ್ನಿ ಅನಾಹುತದಲ್ಲಿ ಜೀವ ಕಳೆದುಕೊಂಡ ಭಾರತೀಯರ ಸಂಖ್ಯೆಯು 45ಕ್ಕೆ ಏರಿಕೆ ಆಗಿದೆ. ಅಷ್ಟೂ ಜನರ ಮೃತದೇಹಗಳನ್ನು ಕುವೈತ್‌ನ ಅಧಿಕಾರಿಗಳು ಗುರುತಿಸಿದ್ದಾರೆ. ಮೃತರಲ್ಲಿ ಫಿಲಿಪೀನ್ಸ್‌ನ ಮೂವರು ಇದ್ದಾರೆ. ಅಗ್ನಿ ದುರಂತದಲ್ಲಿ ಕನಿಷ್ಠ 49 ಮಂದಿ ಮೃತಪಟ್ಟಿದ್ದಾರೆ.

ಕುವೈತ್‌ನ ಅಮೀರ್ ಆಗಿರುವ ಶೇಖ್ ಮಿಶಾಲ್ ಅಲ್–ಅಹ್ಮದ್ ಅಲ್–ಜಬೀರ್ ಅಲ್–ಸಬಾ ಅವರು ಮೃತರ ಕುಟುಂಬಗಳಿಗೆ ಹಣಕಾಸಿನ ನೆರವು ಒದಗಿಸಲು ಸೂಚಿಸಿದ್ದಾರೆ. ಅಲ್ಲದೆ, ಭಾರತೀಯರ ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸಲು ವಿಮಾನವನ್ನು ಸಜ್ಜಗೊಳಿಸುವಂತೆಯೂ ಅವರು ಸೂಚಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಕೇರಳದವರ ಸಂಖ್ಯೆ 24(ತಿರುವನಂತಪುರ ವರದಿ): ಕುವೈತ್‌ ಅಗ್ನಿ ಅನಾಹುತದಲ್ಲಿ ಮೃತಪಟ್ಟ ಕೇರಳದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಏಳು ಮಂದಿಗೆ ಕುವೈತ್‌ನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಮೃತಪಟ್ಟಿರುವ ಕೇರಳದವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕುವೈತ್‌ನಲ್ಲಿ ಆರಂಭಿಸಿರುವ ಸಹಾಯವಾಣಿ ನೀಡಿರುವ ಮಾಹಿತಿ ಆಧರಿಸಿ ಇಲಾಖೆಯ ಸಿಇಒ ಅಜಿತ್ ಕೊಲಶ್ಶೇರಿ ಅವರು ತಿಳಿಸಿದ್ದಾರೆ.

ಮೃತಪಟ್ಟ ಭಾರತೀಯರಲ್ಲಿ ತಮಿಳುನಾಡಿನ ಐವರು ಇದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೂಚನೆ ಆಧರಿಸಿ, ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗಾಯಗೊಂಡವರ ಚಿಕಿತ್ಸೆಗೆ ನೆರವು ಒದಗಿಸಲಾಗುತ್ತಿದೆ ಎಂದು ಅನಿವಾಸಿ ತಮಿಳರ ಕಲ್ಯಾಣ ಸಚಿವ ಜಿಂಜೀ ಕೆ.ಎಸ್. ಮಸ್ತಾನ್ ತಿಳಿಸಿದ್ದಾರೆ.

ಕುವೈತ್‌ನ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ದೇಶದ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್‌ನ ಏಳು ಅಂತಸ್ತುಗಳ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 49 ಮಂದಿ ವಿದೇಶಿಯರು ಮೃತಪಟ್ಟಿದ್ದಾರೆ.

₹5 ಲಕ್ಷ ಪರಿಹಾರ: ದುರಂತದಲ್ಲಿ ಮೃತಪಟ್ಟ ಕೇರಳದವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಕೇರಳ ಸರ್ಕಾರ ಹೇಳಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಂಪುಟದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಗಾಯಗೊಂಡವರಿಗೆ ತಲಾ ₹1 ಲಕ್ಷ ನೆರವು ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರನ್ನು ಕುವೈತ್‌ಗೆ ತುರ್ತಾಗಿ ಕಳುಹಿಸಿ, ಅಲ್ಲಿ ಗಾಯಗೊಂಡವರ ಚಿಕಿತ್ಸೆಗೆ ನೆರವು ಒದಗಿಸಲು ಹಾಗೂ ಮೃತದೇಹಗಳನ್ನು ರಾಜ್ಯಕ್ಕೆ ಆದಷ್ಟು ಬೇಗ ತರುವ ಕೆಲಸಕ್ಕೆ ನೆರವು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ, ಪ್ರಮುಖ ಉದ್ಯಮಿಗಳಾದ ಎಂ.ಎ. ಯೂಸುಫ್ ಅಲಿ ಮತ್ತು ರವಿ ಪಿಳ್ಳೈ ಅವರು ಕ್ರಮವಾಗಿ ತಲಾ ₹5 ಲಕ್ಷ ಹಾಗೂ ₹2 ಲಕ್ಷ ನೀಡುವುದಾಗಿ ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ. ಈ ಇಬ್ಬರು ಉದ್ಯಮಿಗಳು ನೀಡುವ ಮೊತ್ತ, ಸರ್ಕಾರದಿಂದ ಸಿಗುವ ಪರಿಹಾರ ಮೊತ್ತವನ್ನು ಒಟ್ಟುಗೂಡಿಸಿದರೆ, ಮೃತಪಟ್ಟವರ ಕುಟುಂಬಗಳಿಗೆ ಒಟ್ಟು ₹12 ಲಕ್ಷ ಪರಿಹಾರ ಸಿಗಲಿದೆ.

ಕುವೈತ್ ತಲುಪಿದ ಸಚಿವ ಸಿಂಗ್

ದುಬೈ/ಕುವೈತ್ ನಗರ : ಅಗ್ನಿ ದುರಂತದಲ್ಲಿ ಗಾಯಗೊಂಡ ಭಾರತೀಯರಿಗೆ ಚಿಕಿತ್ಸೆ ಒದಗಿಸುವ ಹಾಗೂ ಮೃತದೇಹಗಳನ್ನು ತ್ವರಿತವಾಗಿ ಭಾರತಕ್ಕೆ ತರುವ ಕಾರ್ಯದ ಮೇಲ್ವಿಚಾರಣೆಗೆ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಗುರುವಾರ ಕುವೈತ್ ತಲುಪಿದ್ದಾರೆ. ಮೃತದೇಹಗಳ ಡಿಎನ್‌ಎ ಪರೀಕ್ಷೆಯನ್ನು ಕುವೈತ್‌ನ ಅಧಿಕಾರಿಗಳು ನಡೆಸುತ್ತಿದ್ದಾರೆ. ಭಾರತೀಯರ ಮೃತದೇಹಗಳನ್ನು ಹೊತ್ತು ತರಲು ಭಾರತೀಯ ವಾಯುಪಡೆಯ ವಿಮಾನವೊಂದು ಕುವೈತ್‌ನಲ್ಲಿ ಇದೆ ಎಂದು ನವದೆಹಲಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರ ಜೊತೆ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ಕಡೆಯಿಂದ ಸಾಧ್ಯವಿರುವ ಎಲ್ಲ ಬಗೆಯ ನೆರವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೈಶಂಕರ್ ಅವರು ಕುವೈತ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್–ಯಾಹ್ಯಾ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು ಮೃತದೇಹಗಳನ್ನು ಭಾರತಕ್ಕೆ ತ್ವರಿತವಾಗಿ ಕಳುಹಿಸಲು ನೆರವಾಗಬೇಕು ಎಂದು ಕೋರಿದ್ದಾರೆ. ದುರಂತದ ಬಗ್ಗೆ ತನಿಖೆ ನಡೆಸಲಾಗುತ್ತದೆ ಹೊಣೆಗಾರಿಕೆ ನಿಗದಿ ಮಾಡಲಾಗುತ್ತದೆ ಎಂದು ಅಲ್–ಯಾಹ್ಯಾ ಅವರು ಜೈಶಂಕರ್ ಅವರಿಗೆ ಭರವಸೆ ನೀಡಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ತಳಮಹಡಿಯಲ್ಲಿ ಅನಿಲ ಸೋರಿಕೆಯಾಗಿದ್ದರ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೆಂಬಲದ ಭರವಸೆ:

ದುರಂತದಲ್ಲಿ ತೊಂದರೆಗೆ ಒಳಗಾದ ಭಾರತೀಯರಿಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲಕ್ಕೆ ನಿಲ್ಲುವ ಭರವಸೆಯನ್ನು ಅಬ್ದುಲ್ಲಾ ಅಲಿ ಅಲ್–ಯಾಹ್ಯಾ ಅವರು ನೀಡಿದ್ದಾರೆ. ಸಚಿವ ಕೀರ್ತಿವರ್ಧನ್ ಸಿಂಗ್ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಅಲ್–ಯಾಹ್ಯಾ ಅವರು ಈ ಭರವಸೆ ನೀಡಿದ್ದಾರೆ. ಕುವೈತ್‌ಗೆ ಬಂದ ಸಿಂಗ್ ಅವರು ಇಲ್ಲಿನ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು ಆಸ್ಪತ್ರೆಗೆ ದಾಖಲಾದವರ ಪೈಕಿ ಬಹುತೇಕರ ಸ್ಥಿತಿ ಸ್ಥಿರವಾಗಿದೆ ಎಂದು ಇಲ್ಲಿನ ಭಾರತೀಯ ದೂತಾವಾಸ ಕಚೇರಿ ತಿಳಿಸಿದೆ. ಬೇರೆ ದೇಶಗಳಿಂದ ಬಂದು ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವವರನ್ನು ಒಂದೇ ಕಟ್ಟಡದಲ್ಲಿ ವಿಪರೀತ ಸಂಖ್ಯೆಯಲ್ಲಿ ಇರಿಸುವುದರ ಬಗ್ಗೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ಆಗಿರುವ ವೈಫಲ್ಯಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ ಎಂದು ಕುವೈತ್‌ನ ಆಂತರಿಕ ವ್ಯವಹಾರಗಳ ಸಚಿವ ಶೇಖ್ ಫಹಾದ್ ಅಲ್–ಯೂಸಫ್ ಅಲ್–ಸಬಾ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT