ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ 2024: ಕಾಂಗ್ರೆಸ್‌ನಿಂದ ಸೀಟುಹಂಚಿಕೆ ಮಾತುಕತೆಗೆ ಚಾಲನೆ

Published 7 ಜನವರಿ 2024, 15:34 IST
Last Updated 7 ಜನವರಿ 2024, 15:34 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದೊಳಗೆ ವ್ಯಾಪಕ ಚರ್ಚೆ ನಡೆಸಿದ ನಡೆದ ಬಳಿಕ ಕಾಂಗ್ರೆಸ್‌, ‘ಇಂಡಿಯಾ’ ಮೈತ್ರಿಕೂಟದ ಕೆಲ ಪಕ್ಷಗಳ ಜೊತೆ ಕೆಲವು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತ ಮಾತುಕತೆಗೆ ಚಾಲನೆ ನೀಡಿದೆ.

ಅದರಂತೆ, ಪಂಜಾಬ್‌ ಮತ್ತು ದೆಹಲಿಯಲ್ಲಿ ಎಎಪಿ ಜೊತೆ ಸೋಮವಾರ ಮಾತುಕತೆ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ಇಂಡಿಯಾ’ ಪಕ್ಷಗಳ ಇತರ ನಾಯಕರ ಜೊತೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಪಕ್ಷದ ಹಿರಿಯ ನಾಯಕರಿಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಸ್ಥಾನ ಹಂಚಿಕೆ ಮಾತುಕತೆಗಳನ್ನು ಪೂರ್ಣಗೊಳಿಸಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 

ಸೀಟು ಹಂಚಿಕೆಗಾಗಿ ನೇಮಿಸಿರುವ ‘ಐವರು ಸದಸ್ಯರ ಸಮಿತಿ’ಯು ರಾಜ್ಯ ಕಾಂಗ್ರೆಸ್‌ ಘಟಕಗಳ ಮುಖ್ಯಸ್ಥರ ಜೊತೆ ಈಗಾಗಲೇ ವಿಸ್ತೃತ ಚರ್ಚೆ ನಡೆಸಿದೆ. ಚರ್ಚೆಯ ಪ್ರಮುಖಾಂಶಗಳನ್ನು ಖರ್ಗೆ ಅವರಿಗೆ ವರದಿ ಮಾಡಿದೆ.

ತಮಿಳುನಾಡಿನಲ್ಲಿ ಡಿಎಂಕೆ, ಬಿಹಾರದಲ್ಲಿ ಆರ್‌ಜೆಡಿ ಮತ್ತು ಜೆಡಿಯು, ಜಾರ್ಖಂಡ್‌ನಲ್ಲಿ ಜೆಎಂಎಂ ಹಾಗೂ ಅಸ್ಸಾಂನಲ್ಲಿ ಕೆಲವು ಪಕ್ಷಗಳ ಜೊತೆ ಕಾಂಗ್ರೆಸ್‌ ವಿಧಾನಸಭೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಆದರೆ ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್‌ ರಾಜ್ಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಹವರ್ತಿ ಪಕ್ಷಗಳ ಜೊತೆ ಸೀಟುಹಂಚಿಕೆ ಕಾಂಗ್ರೆಸ್‌ಗೆ ಅಷ್ಟು ಸುಲಭವಿಲ್ಲ ಎಂದೇ ಹೇಳಲಾಗಿದೆ.

ಈಚೆಗೆ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದ (ಎಸ್‌ಪಿ) ಜೊತೆ ಸ್ಥಾನ ಹಂಚಿಕೆ ಮಾಡಿಕೊಳ್ಳಲು ಕಾಂಗ್ರೆಸ್‌ ನಿರಾಕರಿಸಿತ್ತು. ಇದು ಎಸ್‌ಪಿಯ ಅಸಮಾಧಾನಕ್ಕೆ ಕಾರಣವಾಗಿತ್ತು. 

ಸದ್ಯ ಕಾಂಗ್ರೆಸ್‌ ಸೀಟುಹಂಚಿಕೆಗಾಗಿ ಮಾತುಕತೆ ಆರಂಭಿಸಿದೆ. ಬಿಜೆಪಿ ಎದುರು ವಿರೋಧ ಪಕ್ಷಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಧ್ಯಮ ಮಾರ್ಗ ತುಳಿಯುವ ನಿರೀಕ್ಷೆಯೂ ಇದೆ.

ಮೈತ್ರಿಕೂಟದ ವಿವಿಧ ಹುದ್ದೆಗಳನ್ನು ಮುಂದಿನ 10–15 ದಿನಗಳ ಒಳಗೆ ಹಂಚಿಕೆ ಮಾಡಲಾಗುವುದು. ಸ್ಥಾನ ಹಂಚಿಕೆ ಕುರಿತ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿಕೊಳ್ಳಲಾಗುವುದು ಎಂದು ಖರ್ಗೆ ಅವರು ಶನಿವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT