ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS POLLS | 200 ಸ್ಥಾನಗಳಲ್ಲಿ ಗೆಲುವು ಸಾಧಿಸಲಿ: ಬಿಜೆಪಿಗೆ ಮಮತಾ ಸವಾಲು

Published 31 ಮಾರ್ಚ್ 2024, 10:56 IST
Last Updated 31 ಮಾರ್ಚ್ 2024, 10:56 IST
ಅಕ್ಷರ ಗಾತ್ರ

ಕೃಷ್ಣನಗರ (ಪಶ್ಚಿಮ ಬಂಗಾಳ): ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವ ಬಿಜೆಪಿಯ ಗುರಿಯನ್ನು ಅಣಕಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ ಎಂದು ಭಾನುವಾರ ಸವಾಲು ಎಸೆದಿದ್ದಾರೆ.

‘2021ರ ವಿಧಾನಸಭಾ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದ ಬಿಜೆಪಿ, 77 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿತ್ತು’ ಎಂದು ಅವರು ಹೇಳಿದರು.

ಕೃಷ್ಣನಗರ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಅಭ್ಯರ್ಥಿ ಮಹುವಾ ಮೊಯಿತ್ರಾ ಪರವಾಗಿ ರ್‍ಯಾಲಿ ನಡೆಸಿದ ಅವರು, ‘ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿ ಇಲ್ಲ. ‘ಇಂಡಿಯಾ’ ಕೂಟದಲ್ಲಿರುವ ಸಿಪಿಎಂ ಮತ್ತು ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜತೆ ಕೈಜೋಡಿಸಿವೆ’ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ಧ್ವನಿ ಎತ್ತುತ್ತಿದ್ದರಿಂದ ಮಹುವಾ ಮೊಯಿತ್ರಾ ಅವರ ವಿರುದ್ಧ ಜಿದ್ದು ಸಾಧಿಸಿ ಲೋಕಸಭೆಯಿಂದ ಹೊರಹಾಕಲಾಯಿತು ಎಂದು ದೂರಿದರು.

ಸಿಎಎ ಜಾರಿಗೆ ಬಿಡುವುದಿಲ್ಲ: ಪೌರತ್ವ ನೋಂದಣಿ ಕಾಯ್ದೆ (ಸಿಎಎ) ಬಗ್ಗೆ ಮಾತನಾಡಿದ ಮಮತಾ, ‘ರಾಜ್ಯದಲ್ಲಿ ಸಿಎಎ ಜಾರಿಗೆ ಅವಕಾಶ ನೀಡುವುದಿಲ್ಲ’ ಎಂಬುದನ್ನು ಪುನರುಚ್ಚರಿಸಿದರು. 

‘ಸಿಎಎಗೆ ಅರ್ಜಿ ಸಲ್ಲಿಸಿದರೆ ಅರ್ಜಿದಾರ ವಿದೇಶಿಗರಾಗುತ್ತಾರೆ. ಹಾಗಾಗಿ ಅದಕ್ಕೆ ಅರ್ಜಿ ಸಲ್ಲಿಸಬೇಡಿ’ ಎಂದು ಅವರು ಎಚ್ಚರಿಕೆ ನೀಡಿದರು.   

‘ಸಿಎಎ. ದೇಶದ ಕಾನೂನುಬದ್ಧ ಪ್ರಜೆಗಳನ್ನು ವಿದೇಶಿಗರನ್ನಾಗಿ ಪರಿವರ್ತಿಸುವ ಬಲೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಿಎಎ ಆಗಲಿ, ಎನ್‌ಆರ್‌ಸಿ ಆಗಲಿ ಜಾರಿ ಮಾಡಲು ಬಿಡುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT