ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛಿಂದ್ವಾರ ‍ಪಾಲಿಕೆಯ 7 ಸದಸ್ಯರು ಬಿಜೆಪಿಗೆ; ಕಾಂಗ್ರೆಸ್‌ಗೆ ಭದ್ರಕೋಟೆಯಲ್ಲೇ ಆತಂಕ

Published 6 ಮಾರ್ಚ್ 2024, 9:49 IST
Last Updated 6 ಮಾರ್ಚ್ 2024, 9:49 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶದ ಛಿಂದ್ವಾರ ನಗರ ಪಾಲಿಕೆಯ ಏಳು ಸದಸ್ಯರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆದಿರುವ ಈ ಬೆಳವಣಿಗೆಯಿಂದ ಕಾಂಗ್ರೆಸ್‌ ಹಿರಿಯ ನಾಯಕ ಕಮಲನಾಥ್‌ ಅವರಿಗೆ ಭಾರಿ ಹಿನ್ನಡೆಯಾಗಿದೆ.

ರಾಜ್ಯ ನಗರಾಭಿವೃದ್ಧಿ ಸಚಿವ ಕೈಲಾಶ್‌ ವಿಜಯವರ್ಗಿಯ ಅವರ ನಿವಾಸದಲ್ಲಿ ಮಂಗಳವಾರ ಸಂಜೆ ಬಿಜೆಪಿಗೆ ಸೇರ್ಪಡೆಯಾದ ಪಾಲಿಕೆ ಸದಸ್ಯರು, 'ಮತ್ತೊಮ್ಮೆ ಮೋದಿ ಸರ್ಕಾರ' ಎಂದು ಘೋಷಣೆ ಕೂಗಿದ್ದಾರೆ.

ಪಾಲಿಕೆ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಪ್ರಕಟಿಸಿದೆ.

ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ 'ಭಾರತ್‌ ಜೋಡೊ ನ್ಯಾಯ ಯಾತ್ರೆ' ಮಧ್ಯಪ್ರದೇಶದಲ್ಲಿ ಹಾದುಹೋಗುತ್ತಿರುವಾಗಲೇ ಪಾಲಿಕೆ ಸದಸ್ಯರು ಕಾಂಗ್ರೆಸ್‌ಗೆ ವಿದಾಯ ಹೇಳಿದ್ದಾರೆ.

ಛಿಂದ್ವಾರ ಗೆಲ್ಲಲು ಬಿಜೆಪಿ ಪಣ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಹಾಗೂ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ಎನಿಸಿರುವ 'ಛಿಂದ್ವಾರ' ಲೋಕಸಭೆ ಸ್ಥಾನವನ್ನು ಗೆಲ್ಲಲೇಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಹಾಗಾಗಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷದ ಬರೋಬ್ಬರಿ 50,000 ಕಾರ್ಯಕರ್ತರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಯೋಜನೆ ರೂಪಿಸಿರುವುದಾಗಿ ಬಿಜೆಪಿ ನಾಯಕರು ಇತ್ತೀಚೆಗೆ ಹೇಳಿದ್ದರು.

ಇಲ್ಲಿಂದ 9 ಸಲ ಸಂಸದರಾಗಿ ಆಯ್ಕೆಯಾಗಿರುವ ಕಮಲನಾಥ್‌, ಕ್ಷೇತ್ರದಾದ್ಯಂತ ಪ್ರಭಾವ ಹೊಂದಿದ್ದಾರೆ. ಸದ್ಯ ಅವರ ಮಗ ನಕುಲ್‌ ನಾಥ್‌ ಇಲ್ಲಿ ಸಂಸದರಾಗಿದ್ದಾರೆ.

ಈ ಕ್ಷೇತ್ರಕ್ಕೆ 1997ರಲ್ಲಿ ನಡೆದ ಉಪಚುನಾವಣೆ ಹೊರತುಪಡಿಸಿ, 1952ರಿಂದ ಈವರೆಗೆ ಕಾಂಗ್ರೆಸ್‌ ಪಕ್ಷವೇ ಗೆಲುವು ಸಾಧಿಸಿದೆ. 2019ರ ಸಾರ್ವತ್ರಿಕ ಚುನಾವಣೆ ವೇಳೆ ರಾಜ್ಯದಲ್ಲಿರುವ ಒಟ್ಟು 29 ಸ್ಥಾನಗಳ ಪೈಕಿ 28ರಲ್ಲಿ ಗೆಲುವು ಕಂಡಿದ್ದ ಬಿಜೆಪಿಗೆ ಛಿಂದ್ವಾರ ಮಾತ್ರ ದಕ್ಕಿರಲಿಲ್ಲ.

2018ರಿಂದ 2022ರ ವರೆಗೆ ಮುಖ್ಯಮಂತ್ರಿಯಾಗಿದ್ದ ಕಮಲನಾಥ್‌ ಅವರು ತಮ್ಮ ಪುತ್ರನೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಅಂತಹ ಆಲೋಚನೆ ಇಲ್ಲ ಎಂದು ನಾಥ್‌ದ್ವಯರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT