ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಂನ ನಾತುಲಾದಲ್ಲಿ ಭಾರಿ ಹಿಮ ಕುಸಿತ: 7 ಮಂದಿ ಸಾವು

Last Updated 4 ಏಪ್ರಿಲ್ 2023, 16:28 IST
ಅಕ್ಷರ ಗಾತ್ರ

ಗ್ಯಾಂಗ್ಟಕ್‌, ಸಿಕ್ಕಿಂ: ‘ಪೂರ್ವ ಸಿಕ್ಕಿಂನ ನಾಥು ಲಾ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಭಾರಿ ಹಿಮಪಾತ ಉಂಟಾಗಿದ್ದು, ದುರಂತದಲ್ಲಿ ಏಳು ಮಂದಿ ಪ್ರವಾಸಿಗರು ಅಸುನೀಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಇಲ್ಲಿಂದ ನಾಥು ಲಾ ಪ್ರದೇಶಕ್ಕೆ ಸಂಪರ್ಕ ಬೆಸೆಯುವ ಜವಾಹರಲಾಲ್‌ ನೆಹರೂ ಮಾರ್ಗದಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ಹಿಮಪಾತ ಉಂಟಾಗಿದ್ದು, ಐದರಿಂದ ಆರು ವಾಹನಗಳು ಹಿಮದಡಿ ಸಿಲುಕಿದ್ದವು. ಈ ವಾಹನಗಳಲ್ಲಿ 30 ಮಂದಿ ಇದ್ದರು. ಈ ಪೈಕಿ 23 ಜನರನ್ನು ರಕ್ಷಿಸಲಾಗಿದೆ. ಇದರಲ್ಲಿ ಆರು ಮಂದಿ ಪ್ರವಾಸಿಗರಿದ್ದು ಅವರು ಆಳವಾದ ಕಂದಕಕ್ಕೆ ಉರುಳಿದ್ದರು’ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಗಾಯಗೊಂಡವರನ್ನು ಚಿಕಿತ್ಸೆಗಾಗಿ ಇಲ್ಲಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರಲ್ಲಿ ಒಬ್ಬ ಮಹಿಳೆ ಹಾಗೂ ಮಗು ಕೂಡ ಇದ್ದಾರೆ’ ಎಂದಿದ್ದಾರೆ.

‘ಪ್ರತಿಕೂಲ ಹವಾಮಾನದಿಂದಾಗಿ ಮಂಗಳವಾರ ಸಂಜೆಯೇ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ನಾಥು ಲಾ ಪ್ರದೇಶವು ಸಮುದ್ರ ಮಟ್ಟದಿಂದ 14,450 ಅಡಿ ಎತ್ತರದಲ್ಲಿದ್ದು, ಭಾರತ ಮತ್ತು ಚೀನಾ ನಡುವಣ ಮೂರು ಮುಕ್ತ ವ್ಯಾಪಾರ ಗಡಿ ಪ್ರದೇಶಗಳಲ್ಲಿ ಒಂದಾಗಿದೆ. ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಈ ಪ್ರದೇಶವು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು.

‘ಪ್ರತಿಕೂಲ ಹವಾಮಾನದ ಕಾರಣ ಪ್ರವಾಸಿಗರ ಭೇಟಿಯನ್ನು 13ನೇ ಮೈಲಿಗಲ್ಲಿನವರೆಗೆ ಸೀಮಿತಗೊಳಿಸಲಾಗಿದೆ. ಹೀಗಿದ್ದರೂ ಪ್ರವಾಸಿಗರು 17ನೇ ಮೈಲಿಗಲ್ಲಿನವರೆಗೂ ಕರೆದುಕೊಂಡು ಹೋಗುವಂತೆ ಚಾಲಕರಿಗೆ ದುಂಬಾಲು ಬೀಳುತ್ತಾರೆ. ಅತ್ಯಂತ ಅಪಾಯಕಾರಿ ಎನಿಸಿರುವ ಈ ಪ್ರದೇಶದಲ್ಲೇ ಹಿಮಪಾತ ಉಂಟಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ದಟ್ಟ ಹಿಮ ಆವರಿಸಿದ್ದರಿಂದಾಗಿ 80 ವಾಹನಗಳು ರಸ್ತೆಯಲ್ಲೇ ಸಿಲುಕಿದ್ದವು. ಅವುಗಳಲ್ಲಿ ಸುಮಾರು 350 ಮಂದಿ ಇದ್ದರು. ಮಧ್ಯಾಹ್ನದ ಹೊತ್ತಿಗೆ ಹಿಮವನ್ನು ತೆರವುಗೊಳಿಸಿ ವಾಹನಗಳನ್ನು ಸುರಕ್ಷಿತವಾಗಿ ಇಲ್ಲಿಗೆ ಕರೆತರಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಾಜ್ಯದ ಪೂರ್ವ ಭಾಗದ ಜಿಲ್ಲೆಗಳ ಅತಿ ಎತ್ತರದ ಪ್ರದೇಶಗಳಲ್ಲಿ ಶುಕ್ರವಾರದಿಂದಲೂ ಹಿಮಪಾತ ಉಂಟಾಗುತ್ತಿದ್ದು, ಮಳೆಯೂ ಸುರಿಯುತ್ತಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

*

ಹಿಮಪಾತ ಉಂಟಾಗಿರುವ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್‌ ತಂಡಗಳನ್ನೂ ಕಳುಹಿಸಲಾಗಿದೆ
–ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT