ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತ್‌ಪುರ: ಟ್ರ್ಯಾಕ್ಟರ್‌ ಹರಿಸಿ ಕೊಲೆ ಪ್ರಕರಣ, ರಾಜಕೀಯ ಕೆಸರೆರೆಚಾಟ

Published 25 ಅಕ್ಟೋಬರ್ 2023, 11:24 IST
Last Updated 25 ಅಕ್ಟೋಬರ್ 2023, 11:24 IST
ಅಕ್ಷರ ಗಾತ್ರ

ಜೈಪುರ: ಭೂವಿವಾದಕ್ಕೆ ಸಂಬಂಧಿಸಿದಂತೆ ಭರತ್‌ಪುರ ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ ಹರಿಸಿ ವ್ಯಕ್ತಿಯೊಬ್ಬನನ್ನು ಸಾಯಿಸಿದ ಪ್ರಕರಣ ಕುರಿತಂತೆ ರಾಜಕೀಯ ಕೆಸರೆರೆಚಾಟ ಆರಂಭವಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದೆ.

ಭರತ್‌ಪುರ ಜಿಲ್ಲೆಯ ಅಡ್ಡಾ ಗ್ರಾಮದಲ್ಲಿ 30 ವರ್ಷದ ವ್ಯಕ್ತಿ ನಿರ್ಪತ್‌ ಸಿಂಗ್‌ ಗುರ್ಜರ್‌ ಅವರ ಮೇಲೆ ಕನಿಷ್ಠ ಎಂಟು ಬಾರಿ ಟ್ರ್ಯಾಕ್ಟರ್‌ ಹರಿಸಲಾಗಿದೆ. ಈ ಆಘಾತಕಾರಿ ಘಟನೆಯ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. 

‘ನೆರೆಹೊರೆಯವರಾದ ಅತರ್‌ ಸಿಂಗ್‌ ಗುರ್ಜರ್‌ ಮತ್ತು ಬಹದೂರ್‌ ಸಿಂಗ್‌ ಗುರ್ಜರ್‌ ನಡುವೆ ಜಾಗಕ್ಕಾಗಿ ವಿವಾದ ಇತ್ತು. ಬುಧವಾರ ಬೆಳಿಗ್ಗೆ 7.30ರ ವೇಳೆಗೆ ಇವರ ನಡುವೆ ಘರ್ಷಣೆ ಆರಂಭವಾಗಿ  ಹಲವರು ಗಾಯಗೊಂಡರು. ನಂತರ ಎಲ್ಲರೂ ಅಲ್ಲಿಂದ ತೆರಳಿದ್ದರು.  ಆ ಬಳಿಕ ದಾಮೋದರ್‌ ಗುರ್ಜರ್‌ ಅವರು ಟ್ರ್ಯಾಕ್ಟರ್‌ ಚಾಲನೆ ಮಾಡಿಕೊಂಡು ಬಂದು ನಿರ್ಪತ್‌ ಮೇಲೆ ಹರಿಸಿದ್ದಾರೆ. ಕುಟುಂಬದವರು ಎಷ್ಟು ತಡೆದರೂ ಕೇಳಲಿಲ್ಲ. ದಾಮೋದರ್‌ ಅವರು ನಿರ್ಪತ್‌ ಅವರಿಗೆ ಸೋದರನೇ ಆಗಬೇಕು’ ಎಂದು ಸರ್ದಾರ್‌ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಜೈಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

 ನಿರ್ಪತ್ ಅವರಿಗೆ ಪತ್ನಿ ಮತ್ತು ನಾಲ್ವರು ಮಕ್ಕಳು ಇದ್ದಾರೆ. ಆರೋಪಿಯನ್ನು ಮತ್ತು ಇತರ ಐವರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ. ಆದರೆ ಯಾರನ್ನೂ ಬಂಧಿಸಿಲ್ಲ. ಎರಡೂ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು ಕೆಲ ಕಾಲದಿಂದ ಜಾಗದ ಬಗ್ಗೆ ವಿವಾದ ಇತ್ತು. ಹಲವು ಬಾರಿ ಪ್ರಕರಣಗಳೂ ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಖಂಡನೆ: 

ಇದೊಂದು ಹೃದಯವಿದ್ರಾವಕ ಘಟನೆ, ಖಂಡನೀಯ ಕೃತ್ಯ ಎಂದು  ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಕ್ರಿಮಿನಲ್‌ ಶಕ್ತಿಗಳು ಬೆಳೆದಿರುವುದೇ  ಇಂತಹ ಪ್ರಕರಣಗಳು ಹೆಚ್ಚಲು ಕಾರಣ ಎಂದು ಹೇಳಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಅವರು,  ಪ್ರಿಯಾಂಕಾ ಗಾಂಧಿ ಅವರು ಗ್ರಾಮಕ್ಕೆ ತೆರಳಿ  ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದೂ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT