ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಸಿಂಗ್ ಹೇಳಿಲ್ಲ:ಮುಂಗೇಕರ್

Published 23 ಏಪ್ರಿಲ್ 2024, 2:37 IST
Last Updated 23 ಏಪ್ರಿಲ್ 2024, 2:37 IST
ಅಕ್ಷರ ಗಾತ್ರ

ಮುಂಬೈ: ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡಿಲ್ಲ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸುಳ್ಳು ಎಂದು ಕಾಂಗ್ರೆಸ್ ನಾಯಕ, ಆರ್ಥಿಕ ತಜ್ಞ ಮತ್ತು ನೀತಿ ಆಯೋಗದ ಸದಸ್ಯರೂ ಆಗಿದ್ದ ಡಾ. ಬಾಲಚಂದ್ರ ಮುಂಗೇಕರ್ ಹೇಳಿದ್ದಾರೆ.

‘ಡಾ.ಸಿಂಗ್ ಅವರ ಹೇಳಿಕೆಯ ಒಂದು ವಾಕ್ಯವನ್ನು ಪ್ರಸ್ತುತಪಡಿಸುವ ಮೂಲಕ ಮೋದಿ ಅವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನವನ್ನು ಸೃಷ್ಟಿಸುವುದು ಬಿಜೆಪಿಯ ತಂತ್ರವಾಗಿದೆ. ಆದರೆ, ಜನರು ಮೋದಿ ಅವರ ಹೇಳಿಕೆಗಳನ್ನು ನಂಬುವುದಿಲ್ಲ’ಎಂದು ಮುಂಬೈ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಮುಂಗೇಕರ್ ಹೇಳಿದ್ದಾರೆ.

ಯುಪಿಎ ಸರ್ಕಾರದ ಭಾಗವಾಗಿದ್ದ ಡಾ. ಮುಂಗೇಕರ್, ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿದ್ದು, ಸತ್ಯವನ್ನು ಮುಂದಿಟ್ಟಿದ್ದಾರೆ.

‘2006ರ ಡಿಸೆಂಬರ್ 9ರಂದು ನಡೆದಿದ್ದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ, 'ದೇಶದ ದಲಿತರು, ಆದಿವಾಸಿಗಳು, ಒಬಿಸಿ, ಮಹಿಳೆಯರು, ಮಕ್ಕಳು ಅಭಿವೃದ್ಧಿಯ ಫಲವನ್ನು ಸವಿಯಬೇಕು ಮತ್ತು ಅಲ್ಪಸಂಖ್ಯಾತ ಸಮುದಾಯವೂ ಪ್ರಯೋಜನ ಪಡೆಯಬೇಕು' ಎಂದು ಡಾ ಮನಮೋಹನ್ ಸಿಂಗ್ ಹೇಳಿದ್ದರು. ಅವರ ಹೇಳಿಕೆಯ ಅರ್ಥವೇನೆಂದರೆ, ಎಸ್‌ಸಿ ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿದ್ದಾರೆ ಎಂಬುದಾಗಿತ್ತು. ಸಭೆಯ ನಂತರ ಡಾ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ನಾನು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದೆವು. ಅಲ್ಪಸಂಖ್ಯಾತರು ಎಂದರೆ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲದೆ ಭಾಷಾ ಅಲ್ಪಸಂಖ್ಯಾತರು ಸಹ ಹೌದು. ಸಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು’ಎಂದು ಡಾ ಮುಂಗೇಕರ್ ಹೇಳಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿರುತ್ತದೆ ಮತ್ತು ಅವರು ಹೆಚ್ಚು ಮಕ್ಕಳನ್ನು ಹೊಂದಿರುವುದರಿಂದ ಅದನ್ನು ಸಮುದಾಯದೊಳಗೆ ಹಂಚಿಕೆ ಮಾಡಲಾಗುತ್ತದೆ ಎಂದು ಸಿಂಗ್ ಹೇಳಿರುವುದಾಗಿ ಮೋದಿ ಈಗ ಹೇಳುತ್ತಿರುವುದು ಸರಿಯೇ? ಚುನಾವಣೆಯಲ್ಲಿ ಧಾರ್ಮಿಕ ತಿರುವು ನೀಡಲು ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಹೇಳಿಕೆ ನೀಡುವುದು ಸೂಕ್ತವಲ್ಲ. 102 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಬಿಜೆಪಿ ಸೋಲುವ ಚಿತ್ರಣ ಸ್ಪಷ್ಟವಾಗಿದೆ. 40ರ ಗಡಿ ತಲುಪಲಾಗದೆ ಮೋದಿ ನಿರಾಸೆಗೊಂಡಿದ್ದಾರೆ’ಎಂದು ಮುಂಗೇಕರ್ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT