ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC Results | ನಾಗರಿಕ ಸೇವಾ ಪರೀಕ್ಷೆಯಲ್ಲಿ ಪೊಲೀಸ್ ಮಕ್ಕಳ ಭರ್ಜರಿ ಸಾಧನೆ

Published 17 ಏಪ್ರಿಲ್ 2024, 15:24 IST
Last Updated 17 ಏಪ್ರಿಲ್ 2024, 15:24 IST
ಅಕ್ಷರ ಗಾತ್ರ

ನವದೆಹಲಿ: ಸಬ್‌ ಇನ್‌ಸ್ಪೆಕ್ಟರ್‌, ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಹೀಗೆ ದೆಹಲಿ ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿಗಳ ಮಕ್ಕಳು ಇತ್ತೀಚೆಗೆ ಪ್ರಕಟವಾದ 2023ರ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಐಪಿಎಸ್‌ ಸೇರಿದಂತೆ ಇನ್ನಿತರ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

26 ವರ್ಷದ ಪ್ರತಿಭಾ ಅವರಿಗೆ ಇದು 2ನೇ ಪ್ರಯತ್ನ. ಇವರ ತಂದೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಆಗಿದ್ದಾರೆ. ತಾಯಿ ಹರಿಯಾಣದ ಆರೋಗ್ಯ ಇಲಾಖೆಯ ಸಿಬ್ಬಂದಿ. ಪ್ರತಿಭಾ ಅವರ ಸೋದರ ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಅತ್ತಿಗೆ ದೆಹಲಿ ಪೊಲೀಸ್‌ನಲ್ಲಿ ಸಬ್‌ ಇನ್‌ಸ್ಪೆಕ್ಟರ್ ಆಗಿದ್ದಾರೆ. ಇದೀಗ ಪ್ರತಿಭಾ ಅವರೂ ಪೊಲೀಸ್ ಇಲಾಖೆ ಸೇರಲು ಉತ್ಸುಕರಾಗಿದ್ದಾರೆ.

‘ನನ್ನ ಈ ಸಾಧನೆಗೆ ನನ್ನ ಕುಟುಂಬದವರ ನೆರವು ಅಪಾರ. ಅವರೆಲ್ಲರ ಸಹಕಾರದಿಂದಾಗಿ ಮನೆಯಲ್ಲಿ ಕಲಿಕೆಯ ವಾತಾವರಣ ನಿರ್ಮಾಣವಾಗಿತ್ತು. ಐಪಿಎಸ್ ಅಧಿಕಾರಿ ಆಗಬೇಕೆಂಬ ನನ್ನ ಕನಸು 2ನೇ ಪ್ರಯತ್ನದಲ್ಲಿ ನನಸಾಗಿದೆ. ಇದಕ್ಕೂ ಮೊದಲು ನಾನು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ನಾಗರಿಕ ಸೇವಾ ಪರೀಕ್ಷೆಗೆ ಸಂಪೂರ್ಣ ಸಮಯ ಮೀಸಲಿಡಲು ಕೆಲಸಕ್ಕೆ ರಾಜೀನಾಮೆ ನೀಡಿದೆ’ ಎಂದಿದ್ದಾರೆ.

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಪ್ರತಿಭಾ ಅವರಿಗೆ ಅವರ ಅಣ್ಣನೇ ಗುರು. ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ 356ನೇ ರ‍್ಯಾಂಕ್ ಪಡೆದಿದ್ದರು.

6ನೇ ರ‍್ಯಾಂಕ್ ಪಡೆದ ಎಎಸ್‌ಐ ಪುತ್ರಿ

ದೆಹಲಿ ಪೊಲೀಸ್‌ನ ಸಹಾಯಕ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಸೃಷ್ಟಿ ದಬಾಸ್ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ. ಸೃಷ್ಟಿ ಅವರು ಸದ್ಯ ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಂಬೈ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ನನ್ನ ಮಗಳು ಮೊದಲ ಪ್ರಯತ್ನದಲ್ಲೇ ಉತ್ತಮ ಸಾಧನೆ ಮಾಡಿರುವುದು ಸಂತಸ ತಂದಿದೆ ಹಾಗೂ ಹೆಮ್ಮೆ ಎನಿಸುತ್ತಿದೆ. ಕೆಲಸ ಮಾಡುತ್ತಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಆನ್‌ಲೈನ್ ಮೂಲಕ ಕೆಲವೊಮ್ಮೆ ಮಾರ್ಗದರ್ಶನ ತೆಗೆದುಕೊಂಡಿದ್ದಳು. ಶಾಲೆಯಿಂದಲೂ ಸೃಷ್ಟಿ ಪ್ರತಿಭಾವಂತೆ. ರಾಜಕೀಯ ವಿಜ್ಞಾನದಲ್ಲಿ ಬಿ.ಎ. ಪದವಿ ಪಡೆದ ನಂತರ, ದೂರ ಶಿಕ್ಷಣ ಮೂಲಕ ಸ್ನಾತಕೋತ್ತರ ಪದವಿ ಪಡೆದಿದ್ದಳು. ನಂತರ ಮುಂಬೈಗೆ ತೆರಳಿ ಅಲ್ಲಿಯೇ ಕೆಲಸ ಮಾಡುತ್ತಿದ್ದಳು’ ಎಂದು ಸೃಷ್ಟಿ ಅವರ ತಂದೆ ಸಂಜೀವ್ ದಬಾಸ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ತಾಯಿಯ ಅಗಲಿಕೆ ನೋವಿನಲ್ಲೂ ಎಎಸ್‌ಐ ಪುತ್ರಿಗೆ 26ನೇ ರ‍್ಯಾಂಕ್

ದೆಹಲಿ ಪೊಲೀಸ್‌ನಲ್ಲಿ ಎಎಸ್‌ಐ ಆಗಿರುವ ಜಸ್‌ಬೀರ್ ಸಿಂಗ್ ರಾಣಾ ಅವರ ಪುತ್ರಿ ರೂಪಲ್ ರಾಣಾ ಅವರು ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ 26ನೇ ರ‍್ಯಾಂಕ್ ಗಳಿಸಿದ್ದಾರೆ.

ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಜಸ್‌ಬೀರ್ ಅವರು ಎಎಸ್‌ಐ ಆಗಿದ್ದಾರೆ. ರೂಪಲ್ ಅವರು ಪರೀಕ್ಷೆಗಾಗಿ ನಿತ್ಯ 12 ಗಂಟೆ ತಯಾರಿ ನಡೆಸುತ್ತಿದ್ದರು ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

‘ಪರೀಕ್ಷೆ ಬರೆದ ನಂತರ ಸಂದರ್ಶನಕ್ಕೆ ಸಿದ್ಧತೆ ನಡೆಸಿದ್ದ ರೂಪಲ್ ಅವರ ತಾಯಿ ನಿಧನರಾದರು. ಆದರೆ ಭರವಸೆ ಕಳೆದುಕೊಳ್ಳದ ಅವರು, ತಾಯಿಯ ಕನಸು ಈಡೇರಿಸಲು ಕಠಿಣ ಪರಿಶ್ರಮ ನಡೆಸಿದ್ದರು. ಅದರ ಫಲ ಸಿಕ್ಕಿದೆ. ಇದು ನಿಜಕ್ಕೂ ಸಾರ್ಥಕ ಕ್ಷಣ. ಖಂಡಿತವಾಗಿಯೂ ರೂಪಲ್ ಐಎಎಸ್ ಆಯ್ಕೆ ಮಾಡಿಕೊಳ್ಳುತ್ತಾರೆ’ ಎಂದು ಜಸ್‌ಬೀರ್ ಹೇಳಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್ ಮಗನಿಗೆ 375ನೇ ರ‍್ಯಾಂಕ್

ದೆಹಲಿ ಪೊಲೀಸ್‌ನ ಸಬ್‌ ಇನ್‌ಸ್ಪೆಕ್ಟರ್‌ ಪವನ್ ಕಡಿಯಾನ್ ಅವರ ಪುತ್ರ ಉದಿತ್ ಕಡಿಯಾನ್ ಅವರು 375ನೇ ರ‍್ಯಾಂಕ್ ಪಡೆದಿದ್ದಾರೆ. ಐಪಿಎಸ್ ಅಧಿಕಾರಿ ಆಗುತ್ತೇನೆ ಎಂಬ ವಿಶ್ವಾಸ ಹೊಂದಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಪರೀಕ್ಷೆ ಬರೆದ ನಂತರ ಯಾವುದೇ ಕೆಲಸಕ್ಕೆ ಸೇರದೆ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

‘ನಾನು ಎಷ್ಟೇ ಹೊತ್ತಿಗೆ ಮನೆಗೆ ಬಂದರೂ ಉದಿತ್ ಓದುತ್ತಲೇ ಇರುತ್ತಿದ್ದ. ಬೆಳಿಗ್ಗೆ 4ರಿಂದ 5ಗಂಟೆಯವರೆಗೂ ಸಿದ್ಧತೆ ನಡೆಸುತ್ತಲೇ ಇರುತ್ತಿದ್ದ. ಫಲಿತಾಂಶ ಪ್ರಕಟವಾಗುವ ಹೊತ್ತಿಗೆ ನಾನು ನ್ಯಾಯಾಲಯದಲ್ಲಿದ್ದೆ. ಅಲ್ಲಿಂದ ನೇರವಾಗಿ ಸಿಹಿ ಖರೀದಿಸಿ, ಸಹೋದ್ಯೋಗಿಗಳಿಗೆ ಹಂಚಿದೆ. ಇಲಾಖೆಯ ಹಿರಿಯ ಅಧಿಕಾರಿಗಳೂ ಕರೆ ಮಾಡಿ ಅಭಿನಂದಿಸಿದರು’ ಎಂದು ಪವನ್ ತಿಳಿಸಿದರು.

ಎಸಿಪಿಗೆ ಯುಪಿಎಸ್‌ಸಿಯಲ್ಲಿ 120ನೇ ರ‍್ಯಾಂಕ್

ದೆಹಲಿ ಪೊಲೀಸ್‌ನ ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಅವರೂ 2023ರಲ್ಲಿ ನಡೆದ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ  120ನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. 

‘ಸದ್ಯ ನಾನು ನನ್ನ ಅಣ್ಣನೊಂದಿಗೆ ಅಸ್ಸಾಂನಲ್ಲಿದ್ದೇನೆ. ಅವರೂ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಮಾರ್ಗದರ್ಶನದಿಂದಲೇ ಇದು ಸಾಧ್ಯವಾಗಿದೆ’ ಎಂದು ಮಧ್ಯಪ್ರದೇಶದ ಸಿಂಗ್ರೌಲಿಯ ಮನೋಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT