ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶ: ಆರು ಎನ್‌ಎಸ್‌ಸಿಎನ್-ಐಎಂ ಉಗ್ರರ ಬಂಧನ

Published 13 ಜನವರಿ 2024, 6:20 IST
Last Updated 13 ಜನವರಿ 2024, 6:20 IST
ಅಕ್ಷರ ಗಾತ್ರ

ಇಟಾನಗರ: ಅರುಣಾಚಲ ಪ್ರದೇಶದ ಲಾಂಗ್‌ಡಿಂಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲಿಮ್-ಇಸ್ಸಾಕ್ ಮತ್ತು ಮುಯಿವಾ (NSCN-IM)ದ ಆರು ಉಗ್ರರನ್ನು ಬಂಧಿಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಉಗ್ರರನ್ನು ಸ್ವಯಂ-ಘೋಷಿತ ವಾಂಚೋ ಪ್ರದೇಶದ ಕಾರ್ಯದರ್ಶಿ ವಾಂಗ್ಪಾಂಗ್ ವಾಂಗ್ಸಾ (28), ಮೇಜರ್ ಪನ್ಸಾ (64), ಕ್ಯಾಪ್ಟನ್ ಮಿಕ್ಗಮ್ (27), ಸಾರ್ಜೆಂಟ್ ತಂಗ್ವಾಂಗ್ (29), ಅಲುಂಗ್ ನ್ಗೊಡಮ್ (31), ಜಮ್‌ಗಾಂಗ್ ಗಂಗ್ಸಾ (27) ಎಂದು ಗುರುತಿಸಲಾಗಿದೆ.

ಲಾಂಗ್‌ಡಿಂಗ್ ಟೌನ್ ಮತ್ತು ನಿಯಾಸಾ ನಡುವಿನ ಪ್ರದೇಶದಲ್ಲಿ ಅರೆಸೇನಾ ಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಉಗ್ರರು ಅಡಗುತಾಣದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಟ್ಟಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಎಸ್‌ಪಿ ಡೆಕಿಯೊ ಗುಮ್ಜಾ ಶನಿವಾರ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ವೇಳೆ ಮೂರು ಅಸಾಲ್ಟ್ ರೈಫಲ್‌ಗಳು, ಡಿಟೋನೇಟರ್‌ಗಳು, ಮೊಬೈಲ್ ಫೋನ್‌ಗಳು ಹಾಗೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಲಾಂಗ್‌ಡಿಂಗ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಉಗ್ರ ಜಮ್‌ಗಾಂಗ್ ಗಂಗ್ಸಾ, ಈಸ್ಟರ್ನ್ ನಾಗಾ ನ್ಯಾಷನಲ್ ಗವರ್ನಮೆಂಟ್ (ENNG) ಸಂಘಟನೆಯ ಮಾಜಿ ಕೇಡರ್ ಆಗಿದ್ದು, 2021ರ ಜುಲೈ 21ರಂದು ಶರಣಾಗಿದ್ದ. ನಂತರ ಅದೇ ವರ್ಷದ ಡಿಸೆಂಬರ್ 31 ರಂದು ಎನ್‌ಎಸ್‌ಸಿಎನ್-ಐಎಂಗೆ ಸೇರ್ಪಡೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT