ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟಾ: ನೀಟ್‌ ಪರೀಕ್ಷೆ ಬರೆದು ನಾಪತ್ತೆಯಾಗಿದ್ದ ಯುವಕ 23 ದಿನಗಳ ಬಳಿಕ ಪತ್ತೆ

ದೇಶದಾದ್ಯಂತ ರೈಲಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದ ನೀಟ್‌ ಆಕಾಂಕ್ಷಿ
Published 31 ಮೇ 2024, 18:24 IST
Last Updated 31 ಮೇ 2024, 18:24 IST
ಅಕ್ಷರ ಗಾತ್ರ

ಕೋಟಾ: ನೀಟ್‌ ಪರೀಕ್ಷೆ ಬರೆದ ಮರುದಿನವಾದ ಮೇ 6ರಂದು ಕೋಟಾದಿಂದ ನಾಪತ್ತೆಯಾಗಿದ್ದ ಯುವಕನನ್ನು ಆತನ ತಂದೆ ಗೋವಾದ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

₹ 11,000ದೊಂದಿಗೆ ಕೋಟಾ ತ್ಯಜಿಸಿದ್ದ ನೀಟ್‌ ಆಕಾಂಕ್ಷಿ ರಾಜೇಂದ್ರ ಪ್ರಸಾದ್‌ ಮೀನಾ (19) ಅವರು, 23 ದಿನಗಳ ಕಾಲ ದೇಶದ ವಿವಿಧೆಡೆ ರೈಲುಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದರು. ಪೋಷಕರ ಕೈಗೆ ಸಿಕ್ಕಾಗ ಯುವಕನ ಕಿಸೆಯಲ್ಲಿ ಇನ್ನೂ ₹ 6,000 ನಗದು ಇತ್ತು.

‘ಕೋಟಾ ತ್ಯಜಿಸುವ ಮುನ್ನ ಮೀನಾ ತನ್ನ ಬಳಿಯಿದ್ದ ಪುಸ್ತಕಗಳು, ಮೊಬೈಲ್‌ ಫೋನ್‌ ಮತ್ತು ಎರಡು ಸೈಕಲ್‌ಗಳನ್ನು ಮಾರಿ ₹ 11,000 ಸಂಗ್ರಹಿಸಿದ್ದ’ ಎಂದು ಅವರ ಚಿಕ್ಕಪ್ಪ ಮಥುರಾ ಲಾಲ್ ಮಾಹಿತಿ ನೀಡಿದರು.

ನೀಟ್‌ ಪರೀಕ್ಷೆ ಬರೆದ ಮರು ದಿನ ತನ್ನ ಪೋಷಕರಿಗೆ ಮೊಬೈಲ್‌ನಲ್ಲಿ ಸಂದೇಶ ರವಾನಿಸಿದ್ದ ಮೀನಾ, ‘ನನಗೆ ಹೆಚ್ಚಿನ ಅಧ್ಯಯನ ನಡೆಸಲು ಇಷ್ಟವಿಲ್ಲ. ಐದು ವರ್ಷಗಳವರೆಗೆ ಮನೆಬಿಟ್ಟು ಹೋಗುತ್ತಿದ್ದೇನೆ’ ಎಂದು ತಿಳಿಸಿದ್ದರು. ತನ್ನ ಬಳಿ ₹8,000 ಇದ್ದು, ಅಗತ್ಯವಿದ್ದರೆ ಕುಟುಂಬವನ್ನು ಸಂಪರ್ಕಿಸುವುದಾಗಿ ಸಂದೇಶದಲ್ಲಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರೇ ರಚಿಸಿದ ನಾಲ್ಕು ತಂಡ:

ಯುವಕನ ಪತ್ತೆಗೆ ಕೋಟಾ ಪೊಲೀಸರು ಸರಿಯಾದ ಶೋಧ ನಡೆಸಿಲ್ಲ ಎಂದು ಆರೋಪಿಸಿದ ಪೋಷಕರು, ತಾವೇ ತಮ್ಮ ಸಂಬಂಧಿಕರ ನಾಲ್ಕು ತಂಡ ರಚಿಸಿಕೊಂಡು ದೇಶದ ವಿವಿಧೆಡೆ ಶೋಧ ನಡೆಸಿದ್ದೆವು ಎಂದು ಹೇಳಿದ್ದಾರೆ.

‘ಕೋಟಾದಿಂದ ತೆರಳಿದ ಮೀನಾ ಎರಡು ದಿನ ಪುಣೆಯಲ್ಲಿದ್ದನು. ಅಲ್ಲಿ ₹1,500 ಕೊಟ್ಟು ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಖರೀದಿಸಿ, ತನ್ನ ಆಧಾರ್‌ ಕಾರ್ಡ್‌ ಬಳಸಿ ಸಿಮ್‌ ಅನ್ನು ಖರೀದಿಸಿದ್ದಾನೆ. ಬಳಿಕ ಅಮೃತಸರಕ್ಕೆ ಪ್ರಯಾಣಿಸಿ, ಸುವರ್ಣ ಮಂದಿರ ವೀಕ್ಷಿಸಿದ್ದಾನೆ. ನಂತರ ಜಮ್ಮುವಿನ ವೈಷ್ಣೋದೇವಿಗೂ ತೆರಳಿದ್ದಾನೆ’ ಎಂದು ಲಾಲ್‌ ಅವರು ವಿವರಿಸಿದರು.

‘ಕೋಟಾ ಪೊಲೀಸರು ಸರಿಯಾಗಿ ಪ್ರಯತ್ನಿಸಿದ್ದರೆ, ಮೀನಾನನ್ನು ಪುಣೆಯಲ್ಲಿ ಸಿಮ್‌ ಖರೀದಿಸಿದಾಗಲೇ ಪತ್ತೆ ಹಚ್ಚಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಜಮ್ಮುನಿವಿನ ಬಳಿಕ ಮೀನಾ ಆಗ್ರಾಕ್ಕೆ ಹೋಗಿ ತಾಜ್‌ಮಹಲ್‌ ನೋಡಿ, ಬಳಿಕ ಒಡಿಶಾದ ಜಗನ್ನಾಥ ಪುರಿಧಾಮಕ್ಕೆ ರೈಲು ಹತ್ತಿದ್ದಾನೆ. ಅಲ್ಲಿಂದ ತಮಿಳುನಾಡಿನ ರಾಮೇಶ್ವರಂಗೆ ತೆರಳಿದ್ದಾನೆ. ನಂತರ ಕನ್ಯಾಕುಮಾರಿ ಮತ್ತು ತಿರುವನಂತಪುರಂಗೂ ಭೇಟಿ ನೀಡಿದ್ದಾನೆ’ ಎಂದು ಕುಟುಂಬದವರು ವಿವರಿಸಿದ್ದಾರೆ.

‘ನಂತರ ಆತ ಗೋವಾಕ್ಕೆ ಬಂದಿದ್ದಾನೆ. ಅಲ್ಲಿ ಬುಧವಾರ ಬೆಳಿಗ್ಗೆ ಮಡಗಾಂವ್‌ ರೈಲು ನಿಲ್ದಾಣದಲ್ಲಿ ರೈಲು ಹತ್ತುವಾಗ, ತಂದೆ ಜಗದೀಶ್‌ ಪ್ರಸಾದ್‌ ಅವರು ಪತ್ತೆ ಹಚ್ಚಿದ್ದಾರೆ’ ಎಂದು ಯುವಕನ ಚಿಕ್ಕಪ್ಪ ವಿವರಿಸಿದರು.

ಇಷ್ಟು ದಿನವೂ ವಿವಿಧ ರೈಲುಗಳಲ್ಲಿ ಸಾಮಾನ್ಯ ಬೋಗಿಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದ ಯುವಕ ₹6,000 ಉಳಿಸುವಲ್ಲಿಯೂ ಯಶಸ್ವಿಯಾಗಿದ್ದಾನೆ. ಮೀನಾ ಅವರ ಪೋಷಕರು ಕೋಟಾದ ವಿಜ್ಞಾನ ನಗರದ ಪೊಲೀಸ್‌ ಠಾಣೆಯಲ್ಲಿ ಮಗನ ನಾಪತ್ತೆ ಕುರಿತು ದೂರು ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT