ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಸಾನ್ ಸಮ್ಮಾನ್ ನಿಧಿ’ಗೆ ಪ್ರಧಾನಿ ಚಾಲನೆ

ಆಯ್ದ ರೈತರ ಖಾತೆಗಳಿಗೆ ಮೊದಲ ಕಂತಿನ ಹಣ ಜಮೆ
Last Updated 24 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಗೋರಖಪುರ (ಉತ್ತರಪ್ರದೇಶ):ರೈತರ ಖಾತೆಗಳಿಗೆ ನೇರವಾಗಿ ಹಣ ನೆರವಿನ ಹಣ ವರ್ಗಾವಣೆ ಮಾಡುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಚಾಲನೆ ನೀಡಿದರು.

ರೈತರಿಗೆ ವಾರ್ಷಿಕ ₹ 6,000 ಹಣವನ್ನು ನೇರವಾಗಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರವು ಈ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿತ್ತು. ಆ ಹಣದ ಮೊದಲ ಕಂತನ್ನು ಈಗ ಸರ್ಕಾರವು ಆಯ್ದ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ.

ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮೂಲಕ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿ, ಯೋಜನೆಯನ್ನು ಮೋದಿ ಉದ್ಘಾಟಿಸಿದರು.

‘ಹಿಂದಿನ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಸಂದರ್ಭದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. 2014ರಲ್ಲಿ ನೀವು ಬಿಜೆಪಿಯನ್ನು ಆಯ್ಕೆ ಮಾಡಿ, ಈ ಪರಿಸ್ಥಿತಿಯನ್ನು ಬದಲಾಯಿಸಲು ಅವಕಾಶ ನೀಡಿದ್ದೀರಿ. ಈಗ ಮೊದಲ ಕಂತಿನ ಹಣವನ್ನು ಜಮೆ ಮಾಡಿದ್ದೇವೆ. ಉಳಿದ ರೈತರಿಗೂ ಕೆಲವೇ ದಿನಗಳಲ್ಲಿ ಹಣ ಸಿಗಲಿದೆ’ ಎಂದು ಮೋದಿ ಘೋಷಿಸಿದರು.

‘ಕೆಲವು ಪಕ್ಷಗಳು ಹತ್ತು ವರ್ಷಕ್ಕೊಮ್ಮೆ ಮಾತ್ರ ರೈತರನ್ನು ನೆನಪಿಸಿಕೊಳ್ಳುತ್ತವೆ. ಆಗ ಅವರು ಸಾಲಮನ್ನಾ ಎಂಬ ತುಂಡು ಮಿಠಾಯಿಯನ್ನು ರೈತರಿಗೆ ಹಂಚಿ ಮತ ಪಡೆಯುತ್ತಾರೆ. ಆದರೆ ಈ ಭಾರಿ ಮೋದಿ ಅವರ ಬಣ್ಣ ಬದಲಾಯಿಸುತ್ತಾನೆ ಎಂಬುದು ಅವರಿಗೆ ಗೊತ್ತಿರಲಿಲ್ಲ’ ಎಂದು ಮೋದಿ ಲೇವಡಿ ಮಾಡಿದರು.

‘ಸಾಲಮನ್ನಾ ಎಂಬುದು ನಮಗೂ ಸುಲಭದ ಕೆಲಸ. ರಾಜಕೀಯ ಲಾಭಕ್ಕಾಗಿ ಈ ತುಂಡು ಮಿಠಾಯಿಯನ್ನು ನಾವೂ ರೈತರಿಗೆ ಹಂಚಬಹುದಿತ್ತು. ಆದರೆ ನಾವು ಅಂತಹ ಪಾಪದ ಕೆಲಸ ಮಾಡುವುದಿಲ್ಲ. ಸಾಲಮನ್ನಾದಿಂದ ಕೆಲವೇ ಮಂದಿಗಷ್ಟೇ ಲಾಭವಾಗುತ್ತದೆ’ ಎಂದು ಅವರು ಹೇಳಿದರು.

‘ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗಿಲ್ಲ’
‘ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಕೇಳುತ್ತಿದ್ದಾರೆ. ಆದರೆಕೇಂದ್ರ ಸರ್ಕಾರವು ರೈತರಿಗೆ ದಿನಕ್ಕೆ ₹ 17 ಕೊಡಲು ಮುಂದಾಗಿದೆ. ಈ ಯೋಜನೆಯಂತೆ ರೈತರಿಗೆ ಪ್ರತಿ ತಿಂಗಳು ₹ 500 ಸಿಗಲಿದೆ.ರೈತರ ಸಮಸ್ಯೆಯ ಗಂಭೀರತೆ ಸರ್ಕಾರಕ್ಕೆ ಅರ್ಥವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದುಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.

**
ರೈತರಿಗೆ ಬಿಡುಗಡೆಯಾದ ₹ 100ರಲ್ಲಿ ₹ 85 ದಲ್ಲಾಳಿಗಳೇ ಕಬಳಿಸುತ್ತಿದ್ದ ಕಾಲ ಯಾವತ್ತೋ ಹೋಯಿತು. ನಮ್ಮ ಸರ್ಕಾರ ನೇರವಾಗಿ ರೈತರಿಗೆ ಹಣ ನೀಡುತ್ತಿದೆ. ದಲ್ಲಾಳಿಗಳಿಗೆ ಇಲ್ಲಿ ಜಾಗವೇ ಇಲ್ಲ.
-ನರೇಂದ್ರ ಮೋದಿ, ಪ್ರಧಾನಿ

**

ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ಅದರಲ್ಲಿ ಇದೊಂದು ಐತಿಹಾಸಿಕ ಕ್ರಮ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಇದರಿಂದ ನೆರವಾಗಲಿದೆ.
-ಮುಕ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

**

ಇದೊಂದು ಅಪ್ರಬುದ್ಧ ಕ್ರಮ. ರೈತರ ಸಮಸ್ಯೆಗಳನ್ನು ಈ ಸರ್ಕಾರವು ಎಷ್ಟು ಲಘುವಾಗಿ ಪರಿಗಣಿಸಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛೆ ಸರ್ಕಾರಕ್ಕೆ ಇಲ್ಲ.
-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

**

ಇದು ‘ವೋಟಿಗಾಗಿ ಹಣ’ ಯೋಜನೆ. ಮತಕ್ಕಾಗಿ ಸರ್ಕಾರವು ಅಧಿಕೃತವಾಗಿ ರೈತ ಕುಟುಂಬಗಳಿಗೆ ಲಂಚ ನೀಡುತ್ತಿದೆ. ಕಷ್ಟಪಡುವ ರೈತನಿಗೂ ಹಣ ಹೋಗಲಿದೆ, ಜಮೀನ್ದಾರನಿಗೂ ಈ ಹಣ ಹೋಗಲಿದೆ
-ಪಿ.ಚಿದಂಬರಂ, ಕಾಂಗ್ರೆಸ್ ನಾಯಕ

**

ಇಂತಹ ಕಲ್ಯಾಣ ಕಾರ್ಯಕ್ರಮ ಜಾರಿಗೆ ದಿನಾಂಕ ನಿಗದಿ ಮಾಡಿರಲಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಸರ್ಕಾರವು ರೈತರನ್ನು ನೆನಪಿಸಿಕೊಂಡಿದೆ ಎಂಬುದು ಸುಳ್ಳು. ಈ ನಿರ್ಧಾರವನ್ನು ಯಾರೂ ಪ್ರಶ್ನಿಸಬಾರದು
-ವೀರೇಂದ್ರ ಸಿಂಗ್ ಮಸ್ತ್, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ

ಅಂಕಿ–ಅಂಶಗಳು
₹ 2,000 –ಪ್ರತಿ ರೈತರಿಗೆ ಮೊದಲ ಕಂತಿನಲ್ಲಿ ನೀಡಿದ ಹಣ
1.01 ಕೋಟಿ –ಮೊದಲ ಹಂತದಲ್ಲಿ ನೆರವಿನ ಹಣ ಪಡೆದ ರೈತರ ಸಂಖ್ಯೆ
₹ 75,000 ಕೋಟಿ –ಯೋಜನೆಯ ಒಟ್ಟು ಮೊತ್ತ
12 ಕೋಟಿ– ಯೋಜನೆಯ ಒಟ್ಟು ಫಲಾನುಭವಿ ರೈತರು
₹ 6,000– ಪ್ರತಿ ರೈತರಿಗೆ ಯೋಜನೆ ಅಡಿ ದೊರೆಯಲಿರುವ ಹಣ (ವಾರ್ಷಿಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT