ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾದಲ್ಲಿ ಸೀತೆ ದೇವಸ್ಥಾನ, ಅರ್ಚಕರ ಗೌರವಧನ ಹೆಚ್ಚಳ- ಕಾಂಗ್ರೆಸ್

ಹಲವು ಭರವಸೆ ಘೋಷಿಸಿದ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್
Published 24 ಅಕ್ಟೋಬರ್ 2023, 16:13 IST
Last Updated 24 ಅಕ್ಟೋಬರ್ 2023, 16:13 IST
ಅಕ್ಷರ ಗಾತ್ರ

ಭೋಪಾಲ್ (ಪಿಟಿಐ): ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಶ್ರೀಲಂಕಾದಲ್ಲಿ ಸೀತಾಮಾತಾ ದೇವಸ್ಥಾನ ನಿರ್ಮಿಸುವ ಯೋಜನೆಗೆ ಪುನಃ ಜೀವ ಕೊಡಲಾಗುವುದು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮಂಗಳವಾರ ಹೇಳಿದ್ದಾರೆ.

ಬಿಜೆಪಿಯ ಹಿಂದುತ್ವ ರಾಜಕಾರಣವನ್ನು ಎದುರಿಸುವ ಉದ್ದೇಶದಿಂದ ಕಮಲ್ ನಾಥ್ ಅವರು, ‘ಹಿಂದೂ ಪುರೋಹಿತರಿಗೆ ವಿಮಾ ರಕ್ಷಣೆ ಒದಗಿಸುವುದರ ಜೊತೆಗೆ ಅವರ ಗೌರವಧನ ಹೆಚ್ಚಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಕಮಲ್ ನಾಥ್ ಅವರು ‘ಎಕ್ಸ್‌’ನಲ್ಲಿ ಘೋಷಿಸಿರುವ ಪ್ರಮುಖ ಭರವಸೆಗಳಲ್ಲಿ, ಶ್ರೀರಾಮ ವನ ಗಮನ ಪಥದ ಅಭಿವೃದ್ಧಿ (ಕಾಡಿನಲ್ಲಿ ವನವಾಸದ ವೇಳೆ ರಾಮ ಸಾಗಿದ ಎನ್ನಲಾದ ಮಾರ್ಗ), ಭಗವಾನ್ ಪರಶುರಾಮನ ಜನ್ಮಸ್ಥಳ ಜನಪವ್ ಅನ್ನು ಪವಿತ್ರ ಯಾತ್ರಾ ಸ್ಥಳವೆಂದು ಘೋಷಿಸುವುದು ಹಾಗೂ ಮೊರೆನಾದಲ್ಲಿ ರವಿದಾಸ್ ಪೀಠ, ರೇವಾದಲ್ಲಿ ಸಂತ ಕಬೀರ್ ಪೀಠ ಸ್ಥಾಪನೆ ಸೇರಿವೆ.

ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಹಿಂದೂ ಸಮುದಾಯದವರಿಗೆ ಆರ್ಥಿಕ ಸಹಾಯ ವಿಸ್ತರಿಸುವ ಯೋಜನೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

‘ರಾಮಾಯಣಕ್ಕೆ ಸಂಬಂಧಿಸಿದ ರಾಮ, ನಿಷಾದ್ರಾಜ್ ಮತ್ತು ಕೇವತ್ರಾಜ್ ವಿಗ್ರಹಗಳನ್ನು ಚಿತ್ರಕೂಟದಲ್ಲಿ ಸ್ಥಾಪಿಸಲಾಗುವುದು. ಮಹಾಕಾಲೇಶ್ವರ ಮತ್ತು ಓಂಕಾರೇಶ್ವರ ದೇವಾಲಯಗಳ ಭದ್ರತೆ ಹೆಚ್ಚಿಸಲಾಗುವುದು. ಈ ದೇವಾಲಯಗಳಲ್ಲಿ ದರ್ಶನಕ್ಕಾಗಿ ಟಿಕೆಟ್ ವ್ಯವಸ್ಥೆ ಸುವ್ಯವಸ್ಥಿತಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಶ್ರವಣ್ ಕುಮಾರ್ ಮಾತಾ-ಪಿತ ಭಕ್ತಿ ಯೋಜನೆ ಪ್ರಾರಂಭಿಸಲಾಗುವುದು. ಇದರ ಅಡಿ  ಶವಸಂಸ್ಕಾರ ಮತ್ತು ನಂತರದ ‘ಅಸ್ತಿ ವಿಸರ್ಜನೆ’ ಆಚರಣೆಗೆ ₹10,000 ಒದಗಿಸಲಾಗುವುದು. ಧಾರ್ಮಿಕ ಸ್ಥಳಗಳ ಸೌಂದರ್ಯೀಕರಣ ಮತ್ತು ಗುರುಗಳ ವಿಗ್ರಹ ಸ್ಥಾಪಿಸುವ ಪ್ರಾರ್ಥನಾ ಸ್ಥಳ ಅಭಿವೃದ್ಧಿಪಡಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ.

ಹೊಸ ಸರ್ಕಾರವು ಎಲ್ಲ ಧರ್ಮಗಳ ಧಾರ್ಮಿಕ ಸ್ಥಳಗಳಿಂದ ಅತಿಕ್ರಮಣ ತೆರವು ಮಾಡಲಿದೆ. ವೈದಿಕ ಬೋಧನೆ ನೀಡಲು ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು ಎಂದರು. 

ವಿಶೇಷವೆಂದರೆ, ಹಿಂದಿನ ಕಮಲ್ ನಾಥ್ ನೇತೃತ್ವದ ಸರ್ಕಾರ ಶ್ರೀಲಂಕಾದಲ್ಲಿ ಸೀತಾ ಮಾತಾ (ಸೀತಾ ದೇವಿ) ಮಂದಿರ ನಿರ್ಮಿಸಲು ಯೋಜಿಸಿತ್ತು. ಆದರೆ, ಸರ್ಕಾರ ಅವಧಿ ಪೂರ್ಣಗೊಳ್ಳುವ ಮೊದಲೇ ಪತನಗೊಂಡ ಕಾರಣ ಯೋಜನೆ ಮುಂದುವರಿಯಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT