ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸರ್ಕಾರದ ಉಪೇಕ್ಷೆಯಿಂದಾಗಿ ತೆಲಂಗಾಣಕ್ಕೆ ಬಂದ ಕಂಪನಿ: ಕೆ.ಟಿ. ರಾಮ ರಾವ್

Published 8 ನವೆಂಬರ್ 2023, 16:24 IST
Last Updated 8 ನವೆಂಬರ್ 2023, 16:24 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್‌ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಹಾಗೂ ರಾಜ್ಯದ ಕೈಗಾರಿಕಾ ಸಚಿವ ಕೆ.ಟಿ. ರಾಮ ರಾವ್ ಅವರು ನೆರೆಯ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಆರೋಪ ಹೊರಿಸಿದ್ದಾರೆ.

ತಾನು ನೀಡುವ ಗ್ಯಾರಂಟಿಗಳಿಗೆ ಕರ್ನಾಟಕದಲ್ಲಿ ಬದ್ಧತೆ ತೋರಿದ ಮಾದರಿಯಲ್ಲಿಯೇ ತೆಲಂಗಾಣದಲ್ಲಿಯೂ ಬದ್ಧತೆ ತೋರಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರದಲ್ಲಿ ಹೇಳುತ್ತಿದೆ. ಇದರ ನಡುವೆ ಕೆಟಿಆರ್ ಅವರು ಹೊಸ ಆರೋಪವೊಂದನ್ನು ಮಾಡಿದ್ದಾರೆ.

ಕೈಗಾರಿಕೆಗಳ ಮುಖ್ಯಸ್ಥರ ಜೊತೆ ಹೈದರಾಬಾದ್‌ನಲ್ಲಿ ಬುಧವಾರ ಸಂವಾದ ನಡೆಸಿದ ಕೆಟಿಆರ್, ‘ಮೈಸೂರು ಮೂಲದ ಕೇನ್ಸ್ ಟೆಕ್ನಾಲಜಿ ಕಂಪನಿಯು ತೆಲಂಗಾಣದಲ್ಲಿ ಘಟಕ ಸ್ಥಾಪಿಸುತ್ತಿದೆ. ನಮ್ಮ ಸರ್ಕಾರವು 10 ದಿನಗಳಲ್ಲಿ ಕಂಪನಿಗೆ ಜಮೀನು ಮಂಜೂರು ಮಾಡಿದೆ. ಈ ಕಂಪನಿಯು ಆರಂಭದಲ್ಲಿ ಕರ್ನಾಟಕ ಸರ್ಕಾರದ ಕದ ತಟ್ಟಿತ್ತು’ ಎಂದು ಹೇಳಿದರು.

‘ಜಮೀನು ಕೊಡುವಂತೆ ಕಂಪನಿಯು ಕೇಳಿತ್ತು. ಆದರೆ ಕರ್ನಾಟಕ ಸರ್ಕಾರದಿಂದ ಯಾವುದೇ ಭರವಸೆ ಸಿಗಲಿಲ್ಲ. ನಂತರ, ಕಂಪನಿಯು ನಮ್ಮ ಸರ್ಕಾರದ ಸಾಧನೆಯಿಂದ ಪ್ರಭಾವಿತವಾಗಿ ಹೊಸ ಘಟಕವನ್ನು ತೆಲಂಗಾಣದಲ್ಲಿ ಸ್ಥಾಪಿಸಲು ತೀರ್ಮಾನಿಸಿತು’ ಎಂದು ಕೆಟಿಆರ್ ಹೇಳಿದರು.

ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇದೆ ಎಂದು ಹೇಳಿದ ಕೆಟಿಆರ್, ರೈತರು ಹಾಗೂ ಇತರ ವಲಯಗಳಿಗೆ ಸೇರಿದ ಜನರಿಗೆ ಇದರಿಂದ ತೊಂದರೆ ಆಗಿದೆ ಎಂದರು. ತೆಲಂಗಾಣದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಇಲ್ಲಿ ವಿದ್ಯುತ್ ಅಭಾವ ಇಲ್ಲ ಎಂದರು.

ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಸ್ಥಿರ ಸರ್ಕಾರ ಹಾಗೂ ಸಮರ್ಥ ನಾಯಕತ್ವವು ಕಂಪನಿಗಳು ಕೇರಳ, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ವಲಸೆ ಬರಲು ಕಾರಣ ಎಂದು ತಿಳಿಸಿದರು.

‘ಕರ್ನಾಟಕದ ಕಳೆದ 10 ವರ್ಷಗಳ ಸಾಧನೆಯನ್ನು ತೆಲಂಗಾಣದ ನಮ್ಮ ಸರ್ಕಾರದ ಯಾವುದೇ ವಲಯದ ಸಾಧನೆಯೊಂದಿಗೆ ಹೋಲಿಸಬಹುದು. ಅಂಕಿ–ಅಂಶಗಳು ಹಲವು ವಿಷಯಗಳನ್ನು ಸ್ಪಷ್ಟಪಡಿಸುತ್ತವೆ’ ಎಂದು ಕೆಟಿಆರ್ ಹೇಳಿದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರೂ ಸ್ಪರ್ಧೆಯಲ್ಲಿದ್ದಾರೆ ಎಂದು ಹೇಳಿದ ಕೆಟಿಆರ್, ಸ್ಥಿರ ಸರ್ಕಾರ ಇಲ್ಲದಿದ್ದರೆ ರಾಜ್ಯವು ಅಭಿವೃದ್ದಿ ಹೊಂದಲು, ಸಮೃದ್ಧಿ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ರಾಜಕೀಯ ಅನಿಶ್ಚಿತತೆಯು ಕೈಗಾರಿಕಾ ವಲಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT