ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಕಾಲವನ್ನು ಕರ್ತವ್ಯ ಕಾಲವನ್ನಾಗಿ ಮಾಡಿ: ಪ್ರಧಾನಿ ನರೇಂದ್ರ ಮೋದಿ

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಿರ್ಧಾರ
Last Updated 17 ಜನವರಿ 2023, 21:34 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದ ಉತ್ತಮ ಯುಗ ಮುಂದೆ ಇದೆ. ಪಕ್ಷವು ದೇಶದ ಅಭಿವೃದ್ಧಿಗಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು. 2047ರ ವರೆಗಿನ 25 ವರ್ಷಗಳ ಅಮೃತ ಕಾಲವನ್ನು ಕರ್ತವ್ಯ ಕಾಲವನ್ನಾಗಿ ಪರಿವರ್ತಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಈ ಭಾಷಣದ ವಿವರಗಳನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಪಡಣವೀಸ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿ ಕೇವಲ ಒಂದು ರಾಜಕೀಯ ಚಳವಳಿಯಾಗಿ ಉಳಿಯದೆ ಸಾಮಾಜಿಕ ಚಳವಳಿಯಾಗಿ ಬದಲಾಗಿದ್ದು, ಸಾಮಾಜಿಕ ಆರ್ಥಿಕ ಪರಿವರ್ತನೆಗೆ ಕೆಲಸ ಮಾಡುತ್ತಿದೆ’ ಎಂದು ಮೋದಿ ಹೇಳಿದರು.

‘ದೇಶದ 18ರಿಂದ 25ರ ನಡುವಿನ ಯುವಜನರು ಭಾರತದ ರಾಜಕೀಯ ಇತಿಹಾಸಕ್ಕೆ ಸಾಕ್ಷಿಯಾಗಿಲ್ಲ. ಆದ್ದರಿಂದ ಅವರಿಗೆ ಹಿಂದಿನ ಸರ್ಕಾರಗಳು ನಡೆಸಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳ ಅರಿವಿಲ್ಲ. ಹಾಗಾಗಿ ಅವರಿಗೆ ಆ ಕುರಿತು ಅರಿವು ಮೂಡಿಸಬೇಕು ಮತ್ತು ಬಿಜೆಪಿಯ ಉತ್ತಮ ಆಡಳಿತದ ಬಗ್ಗೆ ಮಾಹಿತಿ ನೀಡಬೇಕು’ ಎಂದರು.

ಯಾವುದೇ ಚುನಾವಣಾ ಉದ್ದೇಶಗಳಿಲ್ಲದೆ ಸಮಾಜದ ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡುವಂತೆ ಬಿಜೆಪಿ ಸದಸ್ಯರಿಗೆ ಪ್ರಧಾನಿ ಸಲಹೆ ನೀಡಿದರು.

2024ರ ಲೋಕಸಭಾ ಚುನಾವಣೆಗೆ ಸುಮಾರು 400 ದಿನಗಳು ಉಳಿದಿದ್ದು, ಪಕ್ಷದ ಕಾರ್ಯಕರ್ತರು ಸಂಪೂರ್ಣ ಬದ್ಧತೆಯಿಂದ ಸಮಾಜದ ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಎಲ್ಲೆಡೆ ವಿಸ್ತರಿಸಬೇಕು ಎಂದರು.

ಪಕ್ಷದ ಸದಸ್ಯರು ಅತಿಯಾದ ಆತ್ಮವಿಶ್ವಾಸ ಹೊಂದಿರಬಾರದು ಎಂದು ಎಚ್ಚರಿಸಿದ ಅವರು, ‘ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್‌ ನೇತೃತ್ವದ ಸರ್ಕಾರದ ವಿರುದ್ಧ 1998ರಲ್ಲಿ ಜನವಿರೋಧಿ ಅಲೆ ಇತ್ತು. ಆದರೂ, ಆ ಪಕ್ಷವು ಆ ಚುನಾವಣೆಯಲ್ಲಿ ಗೆಲುವು ಸಾಧಿಸಿತು’ ಎಂದು ಉದಾಹರಣೆ ನೀಡಿದರು.

ಪ್ರಧಾನಿಗೆ ಆಹ್ವಾನ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ರಾತ್ರಿ ಭೇಟಿ ಮಾಡಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಬರುವಂತೆ ಆಹ್ವಾನಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನೇಪಥ್ಯದಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ, ಈ ಆಹ್ವಾನ ನೀಡಿದರು. ಅದಕ್ಕೆ ಪ್ರಧಾನಿ ಒಪ್ಪಿದರು.

ಬಿಜೆಪಿ ಅಧ್ಯಕ್ಷ ನಡ್ಡಾ ಅವಧಿ ವಿಸ್ತರಣೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿಯನ್ನು ಮುಂದಿನ ವರ್ಷದ ಜೂನ್‌ ವರೆಗೆ ವಿಸ್ತರಿಸಲು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಯಿತು.

ನಡ್ಡಾ ಅವಧಿಯನ್ನು ವಿಸ್ತರಿಸುವ ಪ್ರಸ್ತಾವವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮಂಡಿಸಿದರು. ಅದನ್ನು ಕಾರ್ಯಕಾರಿಣಿಯು ಸರ್ವಾನುಮತದಿಂದ ಅನುಮೋದಿಸಿತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷವು 2024ರ ಲೋಕಸಭಾ ಚುನಾವಣೆಯಲ್ಲಿ 2019ಕ್ಕಿಂತ ದೊಡ್ಡ ಜನಾದೇಶದೊಂದಿಗೆ ಗೆಲುವು ಸಾಧಿಸಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಡ್ಡಾ ಅವಧಿಯನ್ನು ವಿಸ್ತರಿಸಲು ಪಕ್ಷದ ಸಂಸದೀಯ ಮಂಡಳಿಯು ಈಗಾಗಲೇ ಅನುಮೋದನೆ ನೀಡಿದೆ.

ನಡ್ಡಾ ಅವರನ್ನು 2020ರ ಜನವರಿ 20ರಂದು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಗೆ ಆಹ್ವಾನ
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ರಾತ್ರಿ ಭೇಟಿ ಮಾಡಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಬರುವಂತೆ ಆಹ್ವಾನಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನೇಪಥ್ಯದಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ, ಈ ಆಹ್ವಾನ ನೀಡಿದರು. ಅದಕ್ಕೆ ಪ್ರಧಾನಿ ಒಪ್ಪಿದರು. ಈ ವೇಳೆ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಇದ್ದರು.

ಈ ಭೇಟಿಯ ವೇಳೆ ರಾಜಕೀಯ ವಿಚಾರಗಳ ಚರ್ಚೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರು ಫೆಬ್ರುವರಿ 27ಕ್ಕೆ 80 ವರ್ಷಕ್ಕೆ ಕಾಲಿಡಲಿದ್ದಾರೆ. ಅದೇ ದಿನ ವಿಮಾನ ನಿಲ್ದಾಣದ ಉದ್ಘಾಟನೆ ಆಗಬೇಕು ಎಂಬುದು ಅವರ ಹಂಬಲ. ಅವರ ಜನ್ಮದಿನಾಚರಣೆಯನ್ನು ಬೆಂಗಳೂರು ಅಥವಾ ಶಿವಮೊಗ್ಗದಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಲು ಅಭಿಮಾನಿಗಳು ಯೋಜಿಸಿದ್ದಾರೆ ಎಂದು ಮೂಲಗಳು ಹೇಳಿಬೆ.

ಯತ್ನಾಳ–ನಿರಾಣಿ ಜತೆಗೆ ಶೀಘ್ರ ಸಭೆ: ಕಟೀಲ್‌
ಕರ್ನಾಟಕ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ಜಟಾಪಟಿ ಪ್ರಕರಣವು ಪಕ್ಷದ ಕೇಂದ್ರ ವರಿಷ್ಠಕ್ಕೆ ಬಂದಿದ್ದು, ಶೀಘ್ರ ಬಗೆಹರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ತಿಳಿಸಿದರು.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಮುರುಗೇಶ ನಿರಾಣಿ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.‍ಪಾಟೀಲ ವಿರುದ್ಧ ಯತ್ನಾಳ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ವಿಚಾರವನ್ನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇನೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಅವರು ನಿರಾಣಿ ಹಾಗೂ ಯತ್ನಾಳ ಜತೆಗೆ ಸಭೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸಲಿದ್ದಾರೆ’ ಎಂದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ‘ಯತ್ನಾಳ ಹೇಳಿಕೆಗಳ ಬಗ್ಗೆ ಆಂತರಿಕ ಸಭೆಯಲ್ಲಿ ಚರ್ಚೆಯಾಗಿದೆ. ಇದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಈ ಬಗ್ಗೆ ಪಕ್ಷ ಗಮನ ಹರಿಸಿ ನಿರ್ಣಯ ಕೈಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT