ನವದೆಹಲಿ: ಬಹುತೇಕ 60 ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಇತ್ತೀಚೆಗೆ ನಡೆಸಿದ ಸಮೀಕ್ಷೆ ವರದಿಯಲ್ಲಿ ಘೋಷಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ಹಿನ್ನೆಲೆಯಲ್ಲಿ ಮೇಯರ್ ಶೆಲ್ಲಿ ಒಬೆರಾಯ್ ಅವರು ದೆಹಲಿ ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ಹಾಗೂ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.
ಪಾಲಿಕೆಯು ಮುಂಗಾರು ಆರಂಭಕ್ಕೂ ಮುನ್ನ ಆರಂಭಿಸಿದ್ದ ಸಮೀಕ್ಷೆ, ಜುಲೈ 6ರ ವರೆಗೂ ನಡೆದಿತ್ತು.
ದೆಹಲಿಯಲ್ಲಿ ಭಾರಿ ಮಳೆ ಸಾಧ್ಯತೆ ಇರುವುದರಿಂದ ಪಾಲಿಕೆಯ ಎಲ್ಲ ಎಂಜಿನಿಯರ್‌ಗಳಿಗೂ ಅವರವರ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ಮೇಲೆ ನಿಗಾ ವಹಿಸುವಂತೆ ಎಂಸಿಡಿ ಸೂಚಿಸಿದೆ.
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 153 ಮಿ.ಮೀ. ಮಳೆಯಾಗಿದೆ. ಇದು 1982ರಿಂದ ಈಚೆಗೆ ಸುರಿದ ದಾಖಲೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
12 ವಲಯಗಳಲ್ಲಿ 30,74,051 ಮನೆಗಳ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ 57 ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ಕಟ್ಟಡಗಳು ವ್ಯಾಪ್ತಿಯಲ್ಲಿರುವ ಚರಂಡಿಗಳ ಹೂಳು ತೆಗೆಯುವ ಕಾರ್ಯ ಪೂರ್ಣಗೊಂಡಿದೆ ಎಂದು ಎಂಸಿಡಿ ಅಧಿಕಾರಿಗಳು ತಿಳಿಸಿದ್ದಾರೆ.