ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಸತ್‌ ಭವನ ಉದ್ಘಾಟನೆ: ಕಾಂಗ್ರೆಸ್– ಬಿಜೆಪಿ ವಾಕ್ಸಮರ

Published 23 ಮೇ 2023, 11:23 IST
Last Updated 23 ಮೇ 2023, 11:23 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ನೂತನ ಸಂಸತ್ ಭವನವನ್ನು ಉದ್ಘಾಟಿಸುವ ತೀರ್ಮಾನ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

‘ಸಂಸತ್ತಿನ ವ್ಯಾಪ್ತಿಯಲ್ಲಿ ರಾಷ್ಟ್ರಪತಿಯವರೂ ಬರುತ್ತಾರೆ. ಅವರಿಂದಲೇ ಉದ್ಘಾಟಿಸಬೇಕು’ ಎಂದು ಕಾಂಗ್ರೆಸ್‌ನ ಮುಖಂಡರು ಸಂವಿಧಾನ ಉಲ್ಲೇಖಿಸಿ ಆಗ್ರಹಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಹರದೀಪ್‌ ಪುರಿ, ‘ಕಾಂಗ್ರೆಸ್‌ನವರು ಸಂವಿಧಾನವನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ರಾಷ್ಟ್ರಪತಿ ಅವರಿಂದಲೇ ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಮನೀಶ್ ತಿವಾರಿ, ಶಶಿ ತರೂರ್ ಅವರು ಆಗ್ರಹಪಡಿಸಿದ್ದರು.

ಸರಣಿ ಟ್ವೀಟ್‌ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಪುರಿ, ‘ಹೊಸ ಸಂಸತ್ ಭವನ ಕುರಿತು ಟೀಕಿಸುವುದು ಮತ್ತು ಪ್ರಶ್ನಿಸುವುದನ್ನು ಅವರು ಹಿಂದೆಯೂ ಮಾಡಿದ್ದರು. ಆದರೆ, ಸ್ವತಃ ಪಾಲಿಸುತ್ತಿರಲಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಮತ್ತು ಇತರೆ ಮುಖಂಡರು, ಈಗ ಸಂವಿಧಾನವನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪುರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರರುವ ಮನೀಶ್‌ ತಿವಾರಿ ಅವರು, ‘ಸಂವಿಧಾನದ 79ನೇ ವಿಧಿಯನ್ನು ಉಲ್ಲೇಖಿಸಿದ್ದು, ಆ ಪ್ರಕಾರ, ಸಂಸತ್ತಿನ ವ್ಯಾಪ್ತಿಗೆ ರಾಷ್ಟ್ರಪತಿ, ಉಭಯ ಸದನಗಳು ಸೇರಿವೆ. ನಾನು ತಪ್ಪಾಗಿ ಉಲ್ಲೇಖಿಸಿದ್ದೇನೆ ಎಂದಾದರೆ, ಬಹುಶಃ ಪುರಿ ಅವರು ಬೇರಾವುದೋ ಸಂವಿಧಾನ ಓದುತ್ತಿರಬಹುದು’ ಎಂದು ವ್ಯಂಗ್ಯವಾಡಿದ್ದಾರೆ.

ವೋಟ್‌ ಬ್ಯಾಂಕ್‌ ಅನ್ನು ಗುರಿಯಾಗಿಸಿ ಬಿಜೆಪಿಯು ದಲಿತರು, ಬುಡಕಟ್ಟು ಜನರನ್ನು ಆಯ್ಕೆ ಮಾಡುತ್ತದೆ ಎಂಬ ಖರ್ಗೆಯವರ ಹೇಳಿಕೆ ಉಲ್ಲೇಖಿಸಿ, ‘ಇದು ಅನಗತ್ಯ ಹೇಳಿಕೆ. ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್‌ ದೇಶದ ಪರವಾಗಿ ಇರಬೇಕಾದ ಉತ್ಸಾಹ ಮತ್ತು ಹೆಮ್ಮೆಯ ಪ್ರಜ್ಞೆಯನ್ನೇ ಕಳೆದುಕೊಂಡಿದೆ’ ಎಂದು ಟೀಕಿಸಿದರು.

ಹೊಸ ಸಂಸತ್‌ ಭವನ ಉದ್ಘಾಟಿಸುವ ಈ ದೇಶದ ಸಂಭ್ರಮದಲ್ಲಿ ಕಾಂಗ್ರೆಸ್‌ ಏಕೆ ಭಾಗಿಯಾಗಬಾರದು ಎಂದು ಪುರಿ ಪ್ರಶ್ನಿಸಿದ್ದಾರೆ. ಹಿಂದೆ, ಇಂದಿರಾ ಗಾಂಧಿ ಅವರು ಪಾರ್ಲಿಮೆಂಟ್‌ ಅನೆಕ್ಸ್‌ ಕಟ್ಟಡವನ್ನು 1975ರ ಅ.24ರಂದು ಉದ್ಘಾಟಿಸಿದ್ದರು. ರಾಜೀವ್‌ ಗಾಂಧಿ ಅವರು ಸಂಸತ್ತಿನ ಗ್ರಂಥಾಲಯ ನಿರ್ಮಾಣಕ್ಕೆ 1987ರ ಆ.15ರಂದು ಭೂಮಿಪೂಜೆ ನೆರವೇರಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT