ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿ: ಮತ್ತೊಂದು ವಿಡಿಯೊ ಬಹಿರಂಗ

ಟಿಎಂಸಿ ನಾಯಕರ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ಮಹಿಳೆಯರಿಗೆ ಹಣ ನೀಡಿದ ಪ್ರಕರಣ* ನಕಲಿ ವಿಡಿಯೊ ಎಂದ ಬಿಜೆಪಿ
Published 13 ಮೇ 2024, 0:54 IST
Last Updated 13 ಮೇ 2024, 0:54 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಸಂದೇಶ್‌ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂ ಹಗರಣದ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶಾಜಹಾನ್‌ ಶೇಖ್‌ ಮತ್ತು ಅವರ ಆಪ್ತರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ 70ಕ್ಕೂ ಹೆಚ್ಚು ಮಹಿಳೆಯರು ತಲಾ ₹ 2,000 ನೀಡಲಾಗಿದೆ ಎಂದು ಬಿಜೆಪಿ ಸ್ಥಳೀಯ ನಾಯಕರೊಬ್ಬರು ಹೇಳಿರುವ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ.

ಶನಿವಾರ ರಾತ್ರಿ ಬಿಡುಗಡೆಯಾಗಿರುವ ಸುಮಾರು 45 ನಿಮಿಷಗಳ ಈ ವಿಡಿಯೊದಲ್ಲಿ ಸಂದೇಶ್‌ಖಾಲಿಯ ಬಿಜೆಪಿ ಮಂಡಲ ಅಧ್ಯಕ್ಷ ಎನ್ನಲಾದ ಗಂಗಾಧರ ಕಾಯಲ್‌ ಎಂಬುವವರು ಈ ಕುರಿತು ಮಾತನಾಡಿದ್ದಾರೆ. ಹಿಂದಿನ ವಾರ ಬಿಡುಗಡೆಯಾಗಿದ್ದ ವಿಡಿಯೊ ಸಹ ಕಾಯಲ್‌ ಎಂಬ ವ್ಯಕ್ತಿಗೇ ಸೇರಿದ್ದಾಗಿತ್ತು.

ಆದರೆ, ಈ ಯಾವುದೇ ವಿಡಿಯೊಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸುದ್ದಿಸಂಸ್ಥೆ ತಿಳಿಸಿದೆ.

‘ಪ್ರತಿಭಟನಕಾರರಲ್ಲಿ ಶೇ 30ರಷ್ಟು ಮಹಿಳೆಯರೇ ಇರುವ 50 ಬೂತ್‌ಗಳಿಗಾಗಿ ₹2.5 ಲಕ್ಷ ನಗದು ಬೇಕು. ಇಲ್ಲಿ ಎಸ್‌.ಸಿ, ಎಸ್‌.ಟಿ ಮತ್ತು ಒಬಿಸಿ ಜನರಿಗೆ ಹಣ ಪಾವತಿಸಬೇಕು. ಪ್ರತಿಭಟನೆ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಮಹಿಳೆಯರು ಇರುವಂತೆ ನೋಡಿಕೊಳ್ಳಬೇಕಿದೆ’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.

ವಿಡಿಯೊ ಕುರಿತು ಪ್ರತಿಕ್ರಿಯೆಗಾಗಿ ಕಾಯಲ್‌ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. 

ಟಿಎಂಸಿ ವಕ್ತಾರರಾದ ರಿಜು ದತ್ತಾ ಅವರು, ‘ಸಂದೇಶ್‌ಖಾಲಿ ಕುರಿತು ಬಿಜೆಪಿ ರೂಪಿಸಿದ್ದ ನಕಲಿ ನಿರೂಪಣೆಯ ಸತ್ಯಾಂಶ ಹೊರಬೀಳುತ್ತಿದೆ’ ಎಂದು ಹೇಳಿದ್ದಾರೆ.

ಸಂದೇಶ್‌ಖಾಲಿ ಪ್ರಕರಣಕ್ಕೆ ಸಂಬಂಧಿಸಿದ ಬಹು ಉದ್ದೇಶಿತ ವಿಡಿಯೊಗಳು ಕೆಲ ದಿನಗಳಿಂದ ಬಹಿರಂಗವಾಗುತ್ತಿದ್ದು, ಟಿಎಂಸಿ ಅದನ್ನು ಹಂಚಿಕೊಳ್ಳುತ್ತಿದೆ. ಮೇ 4ರಂದು ಬಿಡುಗಡೆ ಆಗಿದ್ದ ಮೊದಲ ವಿಡಿಯೊ ಟೇಪ್‌ನಲ್ಲಿ, ‘ಈ ಕುರಿತ ಇಡೀ ಪಿತೂರಿಯಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೈವಾಡ ಇದೆ’ ಎಂದು ಕಾಯಲ್‌ ಎಂಬುವವರು ಹೇಳಿರುವುದು ದಾಖಲಾಗಿದೆ. 

ಎರಡನೇ ವಿಡಿಯೊದಲ್ಲಿ, ‘ಸ್ಥಳೀಯ ಬಿಜೆಪಿ ನಾಯಕರೊಬ್ಬರು ಹಲವಾರು ಮಹಿಳೆಯರಿಂದ ಖಾಲಿ ಹಾಳೆಯ ಮೇಲೆ ಸಹಿ ತೆಗೆದುಕೊಂಡಿದ್ದರು. ನಂತರ, ಟಿಎಂಸಿ ಮುಖಂಡರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ದೂರುಗಳನ್ನು ಅದೇ ಹಾಳೆಗಳ ಮೇಲೆ ಬರೆದು ಠಾಣೆಗೆ ನೀಡಲಾಗಿದೆ’ ಎಂದು ಮಹಿಳೆಯೊಬ್ಬರು ಆರೋಪಿಸಿರುವುದು ದಾಖಲಾಗಿತ್ತು.

ಮತ್ತೊಂದು ವಿಡಿಯೊ ಕ್ಲಿಪ್‌ನಲ್ಲಿ, ಬಶೀರ್‌ಹಾಟ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ ಅವರು, ‘ಅತ್ಯಾಚಾರ ಸಂತ್ರಸ್ತೆಯರನ್ನು ರಾಷ್ಟ್ರಪತಿಗಳ ಭೇಟಿಗೆಂದು ದೆಹಲಿಗೆ ಕರೆದೊಯ್ದ ಕುರಿತು ನನಗೆ ತಿಳಿದಿಲ್ಲ’ ಎಂದು ಹೇಳಿದ್ದು ಬಹಿರಂಗವಾಗಿತ್ತು. 

ಇವೆಲ್ಲ ನಕಲಿ ವಿಡಿಯೊಗಳು– ಬಿಜೆಪಿ:

‘ಈ ಸಂಬಂಧ ಬಿಡುಗಡೆ ಆಗಿರುವ ಎಲ್ಲ ವಿಡಿಯೊಗಳು ನಕಲಿ ಆಗಿದ್ದು, ಅವುಗಳನ್ನು ಟಿಎಂಸಿ ಬಳಸಿಕೊಳ್ಳುತ್ತಿದೆ. ಟಿಎಂಸಿಗೆ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮಹಿಳೆಯರ ಬಗ್ಗೆ ಕನಿಷ್ಠ ಗೌರವವೂ ಇಲ್ಲವಾಗಿದೆ’ ಎಂದು ಬಿಜೆಪಿ ರಾಜ್ಯ ವಕ್ತಾರರಾದ ಸಮಿಕ್‌ ಭಟ್ಟಾಚಾರ್ಯ ಹೇಳಿದ್ದಾರೆ.

ಎನ್‌ಸಿಡಬ್ಲ್ಯು ಅಧ್ಯಕ್ಷೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿನ ಅಮಾಯಕ ಮಹಿಳೆಯರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಮತ್ತು ಬಿಜೆಪಿ ನಾಯಕ ಪಿಯಾಲಿ ದಾಸ್‌ ಅವರು ಕ್ರಿಮಿನಲ್‌ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಟಿಎಂಸಿ ಭಾನುವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಈ ಇಬ್ಬರು ‘ನಕಲಿ ವಂಚನೆ ಮೋಸ ಬೆದರಿಕೆ ಮತ್ತು ಕ್ರಿಮಿನಲ್‌ ಪಿತೂರಿಯಂತಹ ಗಂಭೀರ ಅಪರಾಧಗಳನ್ನು ಎಸಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂದೇಶ್‌ಖಾಲಿಯ ಮಹಿಳೆಯೊಬ್ಬರ ಸಂದರ್ಶನವನ್ನು ದೂರಿನಲ್ಲಿ ಉಲ್ಲೇಖಿಸಿರುವ ಟಿಎಂಸಿ ಈ ವಿಷಯವನ್ನು ತುರ್ತಾಗಿ ಚುನಾವಣಾ ಆಯೋಗದ ಗಮನಕ್ಕೆ ತರಲಾಗುತ್ತಿದ್ದು ತಕ್ಷಣವೇ ಮಧ್ಯ ಪ್ರವೇಶಿಸುವಂತೆ ಕೋರಿದೆ. ಈ ಕುರಿತ ಸಂದರ್ಶನವನ್ನು ಟಿಎಂಸಿ ಮೇ 10ರಂದು ‘ಎಕ್ಸ್‌’ನಲ್ಲಿ ಹಂಚಿಕೊಂಡಿತ್ತು..

ಟಿಎಂಸಿ ಗೂಂಡಾಗಳಿಂದ ಮಹಿಳೆಯರಿಗೆ ಬೆದರಿಕೆ: ಪ್ರಧಾನಿ

ಬ್ಯಾರಕ್‌ಪುರ/ಹೂಗ್ಲಿ (ಪಿಟಿಐ): ಸಂದೇಶ್‌ಖಾಲಿಯಲ್ಲಿ ಟಿಎಂಸಿ ನಾಯಕರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಆಡಳಿತಾರೂಢ ಪಕ್ಷದ ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿಯು ‘ವೋಟ್‌ ಬ್ಯಾಂಕ್‌’ ರಾಜಕೀಯಕ್ಕಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಟೀಕಿಸಿದರು. ಬ್ಯಾರಕ್‌ಪುರ ಮತ್ತು ಹೂಗ್ಲಿಯಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು ‘ಟಿಎಂಸಿ ಆಳ್ವಿಕೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಂತಾಗಿದ್ದಾರೆ’ ಎಂದು ಆರೋಪಿಸಿದರು. ‘ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಟಿಎಂಸಿಯ ಯಾರೊಬ್ಬರನ್ನೂ ಬಿಡುವುದಿಲ್ಲ’ ಎಂದು ಹೇಳಿದರು.  ಟಿಎಂಸಿ ಆಡಳಿತದಲ್ಲಿ ಬಂಗಾಳವು ಭ್ರಷ್ಟಾಚಾರ ಮತ್ತು ಬಾಂಬ್‌ ತಯಾರಿಕೆಯ ಗುಡಿ ಕೈಗಾರಿಕೆಯಾಗಿ ಮಾರ್ಪಟ್ಟಿದೆ. ರಾಜ್ಯದ ಆಡಳಿತ ವ್ಯವಸ್ಥೆಯು ವೋಟ್‌ ಬ್ಯಾಂಕ್‌ಗಾಗಿ ಪೂರ್ಣವಾಗಿ ಶರಣಾಗಿದೆ. ಇಲ್ಲಿ ಭಗವಾನ್‌ ಶ್ರೀರಾಮನ ಹೆಸರನ್ನು ಉಲ್ಲೇಖಿಸಲು ಅಥವಾ ರಾಮನವಮಿ ಆಚರಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.  ‘ಟಿಎಂಸಿ ಶಾಸಕ ಹುಮಾಯೂನ್‌ ಕಬೀರ್‌ ಅವರು ಇತ್ತೀಚೆಗೆ ಹಿಂದೂಗಳನ್ನು ಭಾಗೀರಥಿ ನದಿಗೆ ಎಸೆಯುತ್ತೇವೆ ಎಂದು ಹೇಳಿದ್ದಾರೆ. ಇದನ್ನೆಲ್ಲ ಹೇಳಲು ಅವರಿಗೆ ಧೈರ್ಯ ಎಲ್ಲಿಂದ ಬರುತ್ತದೆ’ ಎಂದು ಮೋದಿ ಪ್ರಶ್ನಿಸಿದರು.

ರಾಜ್ಯಪಾಲರ ರಾಜೀನಾಮೆ ಕೇಳಿಲ್ಲವೇಕೆ: ಮಮತಾ ಪ್ರಶ್ನೆ

ಬರಾಸತ್‌ (ಪಿಟಿಐ): ‘ಸಂದೇಶ್‌ಖಾಲಿ ಕುರಿತು ಸುಳ್ಳುಗಳನ್ನು ಹೇಳುವುದನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ಏಕೆ ಮೌನವಾಗಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ನೀಡುವಂತೆ ಅವರು ಏಕೆ ಕೇಳುತ್ತಿಲ್ಲ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದರು. ಬ್ಯಾರಕ್‌ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು ‘ಸಂದೇಶ್‌ಖಾಲಿ ಕುರಿತು ಬಿಜೆಪಿಯ ಪಿತೂರಿ ಈಗ ಸಾರ್ವಜನಿಕವಾಗಿದ್ದು ಅವರು ನಾಚಿಕೆಪಡಬೇಕು’ ಎಂದು ಅವರು ಬಿಜೆಪಿಯ ಸ್ಥಳೀಯ ನಾಯಕರೊಬ್ಬರ ವಿಡಿಯೊ ಉಲ್ಲೇಖಿಸಿ ಹೇಳಿದರು.

ಸಂದೇಶ್‌ಖಾಲಿ ಠಾಣೆ ಎದುರು ಬಿಜೆಪಿ ಪ್ರತಿಭಟನೆ

ಸಂದೇಶ್‌ಖಾಲಿ (ಪಿಟಿಐ): ಸುಳ್ಳು ದರೋಡೆ ಪ್ರಕರಣದಲ್ಲಿ ಬಂಧಿಸಿರುವ ಬಿಜೆಪಿ ಕಾರ್ಯಕರ್ತನ ಬಿಡುಗಡೆಗೆ ಆಗ್ರಹಿಸಿ ಹಾಗೂ ಪಕ್ಷದ ಸ್ಥಳೀಯ ನಾಯಕರ ವಿರುದ್ಧ ದುರುದ್ದೇಶದಿಂದ ಕೂಡಿದ ವಿಡಿಯೊಗಳು ಪ್ರಸಾರವನ್ನು ತಡೆಯುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಭಾನುವಾರ ಸಂದೇಶ್‌ಖಾಲಿ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಸಂದೇಶ್‌ಖಾಲಿ ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಉದ್ದೇಶದ ವಿಡಿಯೊಗಳು ಕೆಲ ದಿನಗಳಿಂದ ಕಾಣಿಸಿಕೊಂಡಿದ್ದು ಟಿಎಂಸಿ ಅದನ್ನು ಹಂಚಿಕೊಂಡಿದೆ. ಹೀಗಾಗಿ ಟಿಎಂಸಿ ಗೂಂಡಾಗಳನ್ನು ಬಂಧಿಸಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಬಶೀರ್‌ಹಾಟ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರೇಖಾ ಪಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT