ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಸ್‌ಕ್ಲಿಕ್‌: ಪುರಕಾಯಸ್ಥ ಸೇರಿ ಇಬ್ಬರಿಗೆ ನ್ಯಾಯಾಂಗ ಬಂಧನ

Published 10 ಅಕ್ಟೋಬರ್ 2023, 14:31 IST
Last Updated 10 ಅಕ್ಟೋಬರ್ 2023, 14:31 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಸ್‌ಕ್ಲಿಕ್‌ ಪ್ರಕರಣದಲ್ಲಿ ಸುದ್ದಿ ಪೋರ್ಟಲ್‌ನ ಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಮತ್ತು ಸಂಸ್ಥೆಯ ಎಚ್‌.ಆರ್‌. ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಕೋರ್ಟ್‌ 10  ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಚೀನಾ ಪರ ಪ್ರಚಾರ ನಡೆಸಲು ಸುದ್ದಿ ಪೋರ್ಟಲ್‌ ಹಣ ಪಡೆದಿದೆ ಎಂಬ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಎಪಿಎ) ಬಂಧಿಸಿದ್ದು, ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಹರ್ದೀಪ್‌ ಕೌರ್ ಅವರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ‘ನನ್ನ ಕಕ್ಷಿದಾರರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ’ ಎಂದು ಪುರಕಾಯಸ್ಥ ಪರ ವಕೀಲರು ಇದನ್ನು ವಿರೋಧಿಸಿದರು.

‘ನನ್ನ ಕಕ್ಷಿದಾರರು ಯಾವ ಭಯೋತ್ಪಾದನಾ ಕೃತ್ಯ ಎಸಗಿದ್ದಾರೆ. ಪತ್ರಕರ್ತ ಅಂತಹ ಕೃತ್ಯ ಎಸಗಬಹುದೇ? ಎಫ್‌ಐಆರ್‌ನಲ್ಲಿರುವ ಆರೋಪಗಳೇನು? ಕೋವಿಡ್‌ ನೀತಿ ಟೀಕಿಸಿ, ರೈತರ ಪ್ರತಿಭಟನೆ ಕುರಿತು ವರದಿ ಮಾಡಿದ್ದೇವೆ. ಅದು ಭಯೋತ್ಪಾದನಾ ಕೃತ್ಯವೇ?’ ಎಂದು ಪುರಕಾಯಸ್ಥ ಪರ ವಕೀಲರು ಪ್ರಶ್ನಿಸಿದರು.

ಚಕ್ರವರ್ತಿ ಪರ ವಕೀಲರು,ನನ್ನ ಕಕ್ಷಿದಾರರು ಪತ್ರಕರ್ತರಲ್ಲ, ಅವರ ಯಾವುದೇ ಹಣವನ್ನು ಪಡೆದಿಲ್ಲ ಎಂದು ವಾದಿಸಿದರು. ಕಾಶ್ಮೀರ ಮತ್ತು ಅರುಣಾಚಲಪ್ರದೇಶ ಇಲ್ಲದ ಭಾರತದ ನಕ್ಷೆಯನ್ನು ನ್ಯೂಸ್‌ಕ್ಲಿಕ್‌ ಪ್ರಕಟಿಸಿದೆ ಎಂಬ ಯಾವುದೇ ಆರೋಪಗಳಿಲ್ಲ ಎಂದರು.

ಪ್ರತಿವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್‌ ಶ್ರೀವಾತ್ಸವ ಅವರು, ಪ್ರಕರಣ ಇನ್ನು ಸಾಕ್ಷ್ಯ ಸಂಗ್ರಹಿಸುವ ಹಂತದಲ್ಲಿದೆ. ಆರೋಪಿಗಳ ನ್ಯಾಯಾಂಗ ಬಂಧನ ಕೋರಿರುವುದು ನ್ಯಾಯಯುತವಾಗಿದೆ ಎಂದು ತಿಳಿಸಿದರು.

ಪುರಕಾಯಸ್ಥ ಮತ್ತು ಚಕ್ರವರ್ತಿ ಇಬ್ಬರನ್ನೂ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ವಿಭಾಗ ಅಕ್ಟೋಬರ್‌ 3ರಂದು ನ್ಯೂಸ್‌ಕ್ಲಿಕ್‌ನ ದೆಹಲಿಯ ಕಚೇರಿಯಲ್ಲಿ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT