ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Nipah: ಕೇರಳದ ಕೋಯಿಕ್ಕೋಡ್‌ನ 5 ಗ್ರಾಮ ಪಂಚಾಯಿತಿಗಳು ಕಂಟೈನ್‌ಮೆಂಟ್ ವಲಯ

Published 13 ಸೆಪ್ಟೆಂಬರ್ 2023, 4:57 IST
Last Updated 13 ಸೆಪ್ಟೆಂಬರ್ 2023, 4:57 IST
ಅಕ್ಷರ ಗಾತ್ರ

ಕೋಯಿಕ್ಕೋಡ್: ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಮೆದುಳಿಗೆ ಹಾನಿಯುಂಟುಮಾಡುವ ನಿಪಾ ವೈರಸ್ ಇಬ್ಬರನ್ನು ಬಲಿ ತೆಗೆದುಕೊಂಡ ನಂತರ ಕೇರಳ ಸರ್ಕಾರ ನಿಪಾ ಸೋಂಕು ಹರಡುವುದನ್ನು ತಡೆಗಟ್ಟುವ ಕ್ರಮಗಳನ್ನು ಬಲಪಡಿಸಿದೆ.

ರೋಗದ ಗಂಭೀರ ಸ್ವರೂಪವನ್ನು ಪರಿಗಣಿಸಿ, ಕೋಯಿಕ್ಕೋಡ್ ಜಿಲ್ಲಾಡಳಿತವು ಏಳು ಗ್ರಾಮ ಪಂಚಾಯಿತಿಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಿದೆ.

ಕೋಯಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅತಂಚೇರಿ, ಮಾರುತೊಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಲ್ಯಪಲ್ಲಿ ಮತ್ತು ಕವಿಲುಂಪಾರ ಪಂಚಾಯಿತಿಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಆದೇಶದವರೆಗೂ ಈ ಕಂಟೈನ್‌ಮೆಂಟ್ ಝೋನ್‌ಗಳ ಒಳಗೆ ಅಥವಾ ಹೊರಗೆ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸದಂತೆ ನೋಡಿಕೊಳ್ಳಲು ಈ ಪ್ರದೇಶಗಳನ್ನು ಸುತ್ತುವರಿಯಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಔಷಧಾಲಯಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಯಾವುದೇ ಸಮಯದ ಮೀತಿ ಇಲ್ಲ.

ಸ್ಥಳೀಯ ಸರ್ಕಾರಿ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು.

ಬ್ಯಾಂಕ್‌ಗಳು, ಇತರ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅಂಗನವಾಡಿಗಳು ಕಾರ್ಯನಿರ್ವಹಿಸಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಕಂಟೈನ್‌ಮೆಂಟ್ ವಲಯಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಬಸ್‌ಗಳು ಅಥವಾ ವಾಹನಗಳು ಈ ಪ್ರದೇಶಗಳಲ್ಲಿ ನಿಲ್ಲಿಸದಂತೆ ಸೂಚಿಸಲಾಗಿದೆ.

ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಕಂಟೈನ್‌ಮೆಂಟ್ ವಲಯಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮಂಗಳವಾರ ಕೋಯಿಕ್ಕೋಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ವೈರಸ್ ಸೋಂಕಿಗೆ ಒಳಗಾದವರಲ್ಲಿ ಒಬ್ಬರು ಒಂಬತ್ತು ವರ್ಷದ ಬಾಲಕ. ಒಟ್ಟು ಐದು ಮಾದರಿಗಳ ಪೈಕಿ ಮೂರು ಪಾಸಿಟಿವ್ ಆಗಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT