ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕ ಜೋಡಿ ಸ್ವಇಚ್ಛೆಯಿಂದ ಒಟ್ಟಿಗಿದ್ದರೆ ನೈತಿಕ ಪೊಲೀಸ್‌ಗಿರಿ ಸಲ್ಲ: ಹೈಕೋರ್ಟ್

Last Updated 31 ಜನವರಿ 2022, 9:53 IST
ಅಕ್ಷರ ಗಾತ್ರ

ಭೋಪಾಲ್: ಇಬ್ಬರು ವಯಸ್ಕರು ಮದುವೆ ಅಥವಾ ಲಿವ್-ಇನ್ ರಿಲೇಶನ್‌ಶಿಪ್ ಮೂಲಕ ಒಟ್ಟಿಗೆ ಇರಲು ಸಿದ್ಧರಿದ್ದರೆ ಯಾವುದೇ ನೈತಿಕ ಪೊಲೀಸ್‌ಗಿರಿಯನ್ನು ಅನುಮತಿಸಲಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.

ಜಬಲ್ಪುರ್ ನಿವಾಸಿ ಗುಲ್ಜಾರ್ ಖಾನ್ ಅವರು ಮಹಾರಾಷ್ಟ್ರದಲ್ಲಿ ಆರತಿ ಸಾಹು (19) ಅವರನ್ನು ವಿವಾಹವಾಗಿದ್ದರು. ಆರತಿ ಸ್ವಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ನಂದಿತಾ ದುಬೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆರತಿ ಸಾಹು ಅವರನ್ನು ಆಕೆಯ ಪೋಷಕರು ಬಲವಂತವಾಗಿ ವಾರಾಣಸಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಖಾನ್ ತನ್ನ ಮನವಿಯಲ್ಲಿ ಆರೋಪಿಸಿದ್ದರು. ಜನವರಿ 28 ರಂದು ಅಡ್ವೊಕೇಟ್ ಜನರಲ್ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾಹು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

‘ಇಬ್ಬರು ವಯಸ್ಕ ವ್ಯಕ್ತಿಗಳು ಮದುವೆಯ ಮೂಲಕ ಅಥವಾ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಒಟ್ಟಿಗೆ ಇರಲು ಸಿದ್ಧರಿದ್ದರೆ, ಅದರಲ್ಲಿ ಯಾವುದೇ ಬಲವಂತ ಇಲ್ಲ ಎಂದಾದರೆ ನೈತಿಕ ಪೊಲೀಸ್‌ಗಿರಿಯನ್ನು ಅನುಮತಿಸಲಾಗುವುದಿಲ್ಲ’ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ, 2021 ರ ನಿಬಂಧನೆಗಳ ದೃಷ್ಟಿಯಿಂದ ರಾಜ್ಯ ಸರ್ಕಾರವು ಆಕ್ಷೇಪಣೆಯನ್ನು ಎತ್ತಿತ್ತು. ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಸೆಕ್ಷನ್ 3 ಅನ್ನು ಈ ಮದುವೆ ಮೂಲಕ ಉಲ್ಲಂಘಿಸಲಾಗಿದೆ. ಆ ರೀತಿ ನಡೆದ ಮದುವೆಯನ್ನು ಅನೂರ್ಜಿತಗೊಳಿಸಬೇಕು ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಆದರೆ, ಕಾಯಿದೆಯಲ್ಲಿ ಯಾವುದೇ ವ್ಯಕ್ತಿಯನ್ನು ಮದುವೆಯ ಉದ್ದೇಶಕ್ಕಾಗಿ ಮತಾಂತರ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಆ ರೀತಿಯ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.

ಮಹಿಳೆ ತಾನು ಅರ್ಜಿದಾರನನ್ನು ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆ ಮತ್ತು ಅವರೊಂದಿಗೆ ಇರಲು ಬಯಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ ಎಂದು ಹೈಕೋರ್ಟ್ ಹೇಳಿದೆ. ಆಕೆ ವಯಸ್ಕಳಾಗಿರುವುದರಿಂದ ವಯಸ್ಸಿನ ವಿವಾದವಿಲ್ಲ ಎಂದು ನ್ಯಾಯಾಲಯ ಹೇಳಿದೆ.

‘ಸಂವಿಧಾನವು ಈ ದೇಶದ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೆ ಅವಳ ಅಥವಾ ಅವನ ಸ್ವಂತ ಇಚ್ಛೆಯಂತೆ ಬದುಕುವ ಹಕ್ಕನ್ನು ನೀಡುತ್ತದೆ’ಎಂದು ಹೈಕೋರ್ಟ್ ಒತ್ತಿ ಹೇಳಿದೆ. ಆರತಿ ಸಾಹು ಅವರನ್ನು ನಾರಿ ನಿಕೇತನಕ್ಕೆ ಕಳುಹಿಸಬೇಕೆಂಬ ಸರ್ಕಾರಿ ವಕೀಲರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ಮಹಿಳೆಯನ್ನು ಆಕೆಯ ಪತಿಯ ಜೊತೆ ಕಳುಹಿಸಬೇಕು ಮತ್ತು ಇಬ್ಬರೂ ಸುರಕ್ಷಿತವಾಗಿ ತಮ್ಮ ಮನೆಗೆ ತಲುಪುವಂತೆ ನೋಡಿಕೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಭವಿಷ್ಯದಲ್ಲಿ ಮಹಿಳೆ ಮತ್ತು ಆಕೆಯ ಪತಿಗೆ ಆಕೆಯ ಪೋಷಕರಿಂದ ಬೆದರಿಕೆ ಬರದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT