ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂದೆ ಮಾತನಾಡಿದ ಬಳಿಕವೇ ನಿರಾಳರಾಗಿದ್ದು’: ಕಾರ್ಮಿಕನ ಮಗ

ಕಾರ್ಮಿಕರ ಗ್ರಾಮಗಳಲ್ಲಿ ಮನೆಮಾಡಿದ ಸಂಭ್ರಮ
Published 29 ನವೆಂಬರ್ 2023, 13:34 IST
Last Updated 29 ನವೆಂಬರ್ 2023, 13:34 IST
ಅಕ್ಷರ ಗಾತ್ರ

ಗುವಾಹಟಿ: ‘ನಮ್ಮ ತಂದೆ ಸುರಂಗದಿಂದ ಹೊರಬಂದು ಮಾತನಾಡಿದ ಬಳಿಕ ಅವರು ಮನೆಗೆ ಮರಳುತ್ತಾರೆ ಎಂಬುದು ಖಚಿತವಾಯಿತು’. ಹೀಗೆಂದು ಸಿಲ್ಕ್ಯಾರಾ–ಬಡಕೋಟ್ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಒಬ್ಬರಾದ ರಾಮ್‌ಪ್ರಸಾದ್‌ ನರ್ಜಾರಿ ಅವರ ಏಕೈಕ ಮಗಳು ಬಿದಂಗ್‌ ನರ್ಜಾರಿ (16) ಹೇಳಿದರು.

ರಾಮ್‌ಪ್ರಸಾದ್‌ ಅವರು ಅಸ್ಸಾಂನ ಕೋಕ್ರಾಝಾರ್‌ ಜಿಲ್ಲೆಯ ರಾಮ್‌ಫಾಲ್‌ಬಿಲ್‌ ಗ್ರಾಮದ ನಿವಾಸಿ. ಸುರಂಗದಿಂದ ಮಂಗಳವಾರ ಹೊರಗೆ ಕರೆತಂದ ಬಳಿಕ ರಾತ್ರಿ ಸುಮಾರು 8.30ಕ್ಕೆ ಅವರು  ಮಗಳ ಜೊತೆ ಮಾತನಾಡಿದರು. ‘ನಮ್ಮ ತಂದೆ ಅಪಾಯದಲ್ಲಿ ಸಿಲುಕಿದ್ದಾರೆ ಎಂಬ ವಿಷಯ ತಿಳಿದಾಗಿನಿಂದ ನಾವು ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ನಮ್ಮ ತಾಯಿ ಹಲವು ಬಾರಿ ಮೂರ್ಛೆ ಹೋಗಿದ್ದರು’ ಎಂದು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಬಿದಂಗ್‌ ತಿಳಿಸಿದರು. 

ಇದಕ್ಕೂ ಮೊದಲು ರಾಮ್‌ಪ್ರಸಾದ್‌ ಅವರು ತಮಿಳುನಾಡಿನಲ್ಲಿ ಉಪ್ಪಿನಕಾಯಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಮನೆಗೆ ವಾಪಸ್ಸಾಗಿದ್ದರು. ಆಗ ಉತ್ತರಾಖಂಡದಲ್ಲಿ ಉದ್ಯೋಗ ದೊರಕುವ ಕುರಿತು ನೆರೆಮನೆಯ ಸಂಜಯ್‌ ಬಾಸುಮತಾರಿ ಅವರಿಂದ ತಿಳಿದರು.

ಸಂಜಯ್‌ ಮತ್ತು ಅವರ ಅಣ್ಣ ಜ್ಯೋತಿಶ್‌ ಇಬ್ಬರೂ ಸುರಂಗ ಮಾರ್ಗ ನಿರ್ಮಾಣ ಯೋಜನೆಯಲ್ಲಿ ಕಾರ್ಮಿಕರಾಗಿದ್ದರು. ಸಂಜಯ್‌ ಅವರು ಮಾಸಿಕ ₹18 ಸಾವಿರ ಆದಾಯ ಪಡೆಯುತ್ತಿದ್ದರು. ಉತ್ತಮ ಆದಾಯ ಗಳಿಸಲು ತಮ್ಮ ತಂದೆ ಕೂಡಾ ಅಲ್ಲಿಯೇ ಉದ್ಯೋಗ ಅರಸಿ ಹೋದರು ಎಂದು ಬಿದಂಗ್‌ ತಿಳಿಸಿದ್ದಾರೆ.

ಸುರಂಗದ ಒಳಗೆ ಸಿಲುಕಿದ್ದ ಸಂಜಯ್‌ ಅವರ ಮನೆಯ ಪರಿಸ್ಥಿತಿಯೂ ರಾಮ್‌ಪ್ರಸಾದ್‌ ಮನೆಯ ಪರಿಸ್ಥಿತಿಗಿಂತ ಭಿನ್ನವಾಗೇನೂ ಇರಲಿಲ್ಲ. ‘ಸುರಂಗದಿಂದ ಹೊರಬಂದ ಅಣ್ಣನ ಜೊತೆ ಮಾತನಾಡಿದೆವು. ಆಗ ನಮಗೆ ಜೀವ ಬಂದಂತಾಯಿತು’ ಎಂದು ಸಂಜಯ್‌ ಸಹೋದರಿ ಪಿಂಕಿ ಹೇಳುತ್ತಾರೆ. ಅವಘಡ ಸಂಭವಿಸಿದ ವೇಳೆ ಜ್ಯೋತಿಶ್‌ ಅವರು ಸುರಂಗದ ಹೊರಗಿದ್ದ ಕಾರಣ ಅವರು ಪಾರಾದರು. 

ರಕ್ಷಣಾ ಕಾರ್ಯ ಯಶಸ್ವಿಯಾದ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅವರಿಬ್ಬರ ಮನೆ ಎದುರು ಸೇರಿದರು. ಅವಘಡ ಸಂಭವಿಸಿದಾಗಿನಿಂದ ಗ್ರಾಮಸ್ಥರು ಸರಿಯಾಗಿ ಊಟ, ನಿದ್ದೆ ಮಾಡಿರಲಿಲ್ಲ. ಅವರಿಬ್ಬರ ಸುರಕ್ಷತೆಗಾಗಿ ಬಾಥೌ ದೇವಾಲಯದಲ್ಲಿ (ಬೋಡೊ ಜನಾಂಗದವರ ಪ್ರಾರ್ಥನಾ ಸ್ಥಳ) ಗ್ರಾಮಸ್ಥರೆಲ್ಲರೂ ಒಟ್ಟಾಗಿ ಪ್ರಾರ್ಥನೆ ಸಲ್ಲಿದ್ದೆವು ಎಂದು ಗ್ರಾಮದ ಮುಖ್ಯಸ್ಥರು ಹೇಳಿದ್ದಾರೆ.

ಸ್ಥಳೀಯವಾಗಿ ಉದ್ಯೋಗಾವಕಾಶಗಳ ಕೊರತೆ ಇರುವ ಕಾರಣ ಇಲ್ಲಿಯ ಜನರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹೋಗುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT