ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಮಾಡಿರುವ ಸಾಧನೆ ಆಧರಿಸಿ ಮತಯಾಚಿಸಿ: ಪ್ರಧಾನಿಗೆ ಎಐಸಿಸಿ ಅಧ್ಯಕ್ಷರ ಪತ್ರ

Published 2 ಮೇ 2024, 16:07 IST
Last Updated 2 ಮೇ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿರುವ ಪ್ರತಿಯೊಬ್ಬರೂ ನಮ್ಮ ಮತ ಬ್ಯಾಂಕ್‌. ಅವರಲ್ಲಿ ಬಡವರು, ಮಹಿಳೆಯರು, ಯುವ ಸಮುದಾಯ, ಕಾರ್ಮಿಕ ವರ್ಗ, ದಲಿತರು ಮತ್ತು ಆದಿವಾಸಿಗಳು ಇದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಪಕ್ಷವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯ ಮೀಸಲಾತಿಯನ್ನು ಕಸಿದು ಅದನ್ನು ತನ್ನ ಮತಬ್ಯಾಂಕ್‌ಗೆ ನೀಡಲಿದೆ ಎಂದು ಪ್ರಧಾನಿ ಮೋದಿ ಅವರು ಎನ್‌ಡಿಎ ಅಭ್ಯರ್ಥಿಗಳಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ ಖರ್ಗೆ ಈ ಪತ್ರ ಬರೆದಿದ್ದು, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ದ್ವೇಷ ಭಾಷಣ’ಗಳನ್ನು ಮಾಡುವ ಬದಲಿಗೆ ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಯನ್ನು ಆಧರಿಸಿ ಮತ ಕೇಳುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸುಳ್ಳು ಸತ್ಯವಾಗದು:

‘ನೀವು ಎನ್‌ಡಿಎ ಅಭ್ಯರ್ಥಿಗಳಿಗೆ ಬರೆದಿರುವ ಪತ್ರವನ್ನು ಗಮನಿಸಿದರೆ, ನಿಮ್ಮ ಭಾಷಣಗಳಲ್ಲಿನ ಸುಳ್ಳುಗಳು ಜನರ ಮೇಲೆ ಪರಿಣಾಮ ಬೀರಿಲ್ಲ ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ನೀವು ನಿಮ್ಮ ಅಭ್ಯರ್ಥಿಗಳಿಗೆ ಸುಳ್ಳನ್ನು ಹೇಳಲು ಸೂಚಿಸಿದ್ದೀರಿ. ಸುಳ್ಳನ್ನು ಸಾವಿರ ಬಾರಿ ಹೇಳಿದರೆ, ಅದೇನು ಸತ್ಯವಾಗುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಮತದಾರರು ಪಕ್ಷಗಳ ಪ್ರಣಾಳಿಕೆಯಲ್ಲಿ ಏನಿವೆ, ಯಾವ ಭರವಸೆಗಳನ್ನು ನೀಡಲಾಗಿದೆ ಎಂಬುದನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ಬುದ್ಧವಂತರಿದ್ದಾರೆ. ನಮ್ಮ ಖಾತರಿಗಳು ತುಂಬ ಸರಳ ಮತ್ತು ಸ್ಪಷ್ಟವಾಗಿವೆ’ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ 1947ರಿಂದ ಪ್ರತಿ ಹಂತದಲ್ಲೂ ಮೀಸಲಾತಿಯನ್ನು ವಿರೋಧಿಸಿವೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಬಿಜೆಪಿಯ ಮಾಜಿ ಹಣಕಾಸು ಸಚಿವರು ಪಿತ್ರಾರ್ಜಿತ ಆಸ್ತಿಗೆ ತೆರಿಗೆ ಬೇಕು ಎಂದು ಹಲವು ಬಾರಿ ಪ್ರತಿಪಾದಿಸಿದ್ದಾರೆ. ಆದರೆ ನೀವು ಪಿತ್ರಾರ್ಜಿತ ತೆರಿಗೆಯನ್ನು ತರಲು ಕಾಂಗ್ರೆಸ್‌ ಬಯಸುತ್ತಿದೆ ಎಂದು ಹೇಳಿರುವುದು ಸರಿಯಲ್ಲ’ ಎಂದಿದ್ದಾರೆ. 

‘ನಿಮ್ಮ ನೀತಿಗಳಿಂದ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದಿರುವ ಅವರು, ‘ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆ, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಬಗ್ಗೆಯಾಗಲೀ, ನಿಮ್ಮ ನಾಯಕರಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಲೀ ಮಾತನಾಡಲು ನಿಮಗೆ ಆಸಕ್ತಿ ಇಲ್ಲ’ ಎಂದು ಟೀಕಿಸಿದ್ದಾರೆ. 

‘ನಿಮ್ಮದು ಚೀನಾ ತುಷ್ಟೀಕರಣ ನೀತಿ’
‘ಕಾಂಗ್ರೆಸ್‌ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ನೀವು ಆರೋಪಿಸಿದ್ದೀರಿ. ಆದರೆ 10 ವರ್ಷಗಳಿಂದ ನಿಮ್ಮ ಚೀನಾ ತುಷ್ಟೀಕರಣ ನೀತಿಯನ್ನು ಮಾತ್ರ ನಾವು ನೋಡಿದ್ದೇವೆ. ಚೀನಾವನ್ನು ಓಲೈಸುತ್ತಿರುವ ನೀವು, ಅದನ್ನು ನುಸುಳುಕೋರ ದೇಶ ಎನ್ನಲು ನಿರಾಕರಿಸಿದ್ದೀರಿ. ಈ ಮೂಲಕ ಗಾಲ್ವಾನ್‌ನಲ್ಲಿ 20 ಭಾರತೀಯ ಯೋಧರ ಬಲಿದಾನವನ್ನು ಅವಮಾನಿಸಿದ್ದೀರಿ. ಅಲ್ಲದೆ ಐದು ವರ್ಷಗಳಲ್ಲಿ ಚೀನಾದ ಆಮದನ್ನು ಶೇ 54.76ರಷ್ಟು ಹೆಚ್ಚಿಸಿದ್ದೀರಿ’ ಎಂದು ಎಐಸಿಸಿ ಅಧ್ಯಕ್ಷರು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT