ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ರಾಜಪ್ರಭುತ್ವವಲ್ಲ, ಪ್ರಜಾಪ್ರಭುತ್ವ: ವಿರೋಧ ಪಕ್ಷಗಳ ತಿರುಗೇಟು

Published 28 ಮೇ 2023, 16:19 IST
Last Updated 28 ಮೇ 2023, 16:19 IST
ಅಕ್ಷರ ಗಾತ್ರ

ನವದೆಹಲಿ: ‘ಸಂಸತ್ತಿನ ಕಾರ್ಯವಿಧಾನಗಳನ್ನು ಗಾಳಿಗೆ ತೂರುವ ಹಾಗೂ ತನ್ನನ್ನೇ ವೈಭವೀಕರಿಸಿಕೊಳ್ಳುವ ಸರ್ವಾಧಿಕಾರಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನವನ್ನು ಉದ್ಘಾಟಿಸಿದ್ದಾರೆ’ ಎಂದು ಕಾಂಗ್ರೆಸ್‌ ಭಾನುವಾರ ಟೀಕಿಸಿದೆ.

‘ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವವನ್ನು ಕಾಪಿಡುವ ಕೆಲಸ ಮಾಡಿದ ನೆಹರೂ ಅವರ ಅಂತ್ಯಸಂಸ್ಕಾರ ನೆರವೇರಿದ ದಿನ ಮೇ 28. ಮಹಾತ್ಮ ಗಾಂಧಿಯನ್ನು ಕೊಲ್ಲಲು ಪ್ರೇರೇಪಿಸಿದ ಹಿಂದುತ್ವ ಸಿದ್ಧಾಂತವನ್ನು ಬಿತ್ತಿದ ಸಾವರ್ಕರ್‌ ಅವರು ಹುಟ್ಟಿದ ದಿನವೂ ಮೇ 28. ಇದೇ ದಿನವೇ ಮೊದಲ ಬಾರಿಗೆ ಆದಿವಾಸಿ ಮಹಿಳೆಯಾದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾದರು. ಇಂಥ ರಾಷ್ಟ್ರಪತಿಗೆ ಅವರ ಸಾಂವಿಧಾನಿಕ ಕರ್ತವ್ಯವನ್ನು ನೆರವೇರಿಸಲು ನಿರಾಕರಿಸಿ ಭವನವನ್ನು ಮೋದಿ ಅವರೇ ಉದ್ಘಾಟಿಸಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಟ್ವೀಟ್‌ ಮಾಡಿದ್ದಾರೆ.

ಸಂಸತ್ತು ಜನರ ಧ್ವನಿ. ಆದರೆ ಪ್ರಧಾನಿ ಮೋದಿ ಅವರು ನೂತನ ಸಂಸತ್ತು ಭವನವನ್ನು ತಮ್ಮ ಪಟ್ಟಾಭಿಷೇಕದಂತೆ ಆಚರಿಸಿಕೊಳ್ಳುತ್ತಿದ್ದಾರೆ.
ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ 

‘ಯಾವತ್ತೋ ಒಂದು ದಿನ ಸಂಸತ್ತಿಗೆ ಬಂದು ಕಲಾಪಗಳಲ್ಲಿ ಭಾಗವಹಿಸುವ ಮೋದಿ, ನೂತನ ಸಂಸತ್‌ ಭವನವನ್ನು ಉದ್ಘಾಟಿಸಿದ್ದಾರೆ. ಜೊತೆಗೆ ನಕಲಿ ಇತಿಹಾಸಕಾರರಿಂದ ಇತಿಹಾಸ ತಿರುಚುವಿಕೆ ಮತ್ತು ಮಾಧ್ಯಮವು ತುತ್ತೂರಿ ಊದುವುದು 2023ರಲ್ಲಿ ವಿಪರೀತವಾಗಿದೆ’ ಎಂದೂ ಹೇಳಿದರು.

‘ಸಂಪ್ರದಾಯ ಹಾಗೂ ಶಿಷ್ಟಾಚಾರಕ್ಕೆ ವಿರುದ್ಧವಾಗಿ ರಾಷ್ಟ್ರಪತಿಯನ್ನು ನಿರ್ಲಕ್ಷಿಸಿ ನೂತನ ಸಂಸತ್‌ ಭವನವನ್ನು ಉದ್ಘಾಟಿಸಲಾಗಿದೆ. ಸಂಸತ್ತನ್ನು ಮುಷ್ಠಿಯೊಳಗೆ ಇರಿಸಿಕೊಳ್ಳಲು ನಡೆಸುತ್ತಿರುವ ಎಲ್ಲ ಯತ್ನಗಳೂ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ’ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ‘ಸಾಮ್ನಾ’ದಲ್ಲಿ ಬರೆದಿದ್ದಾರೆ.

ನೂತನ ಸಂಸತ್ತಿನ ಶಿಲಾನ್ಯಾಸ ಸಮಾರಂಭದಿಂದ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಹೊರಗಿಡಲಾಯಿತು. ಈಗ ಉದ್ಘಾಟನೆ ವೇಳೆ  ದ್ರೌಪದಿ ಮುರ್ಮು ಅವರನ್ನು ಹೊರಗಿಡಲಾಗಿದೆ.
ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಎನ್‌ಸಿಪಿಯ ರಾಷ್ಟ್ರೀಯ ವಕ್ತಾರ ಕ್ಲಾಯ್ಡ್‌ ಕ್ರಾಸ್ಟೊ ಟ್ವೀಟ್‌ ಮಾಡಿ, ‘ನಮ್ಮದು ಪ್ರಜಾಪ್ರಭುತ್ವವೇ ಹೊರತು ರಾಜಪ್ರಭುತ್ವವಲ್ಲ. ಅಧಿಕಾರವನ್ನು ದೇಶದ ಜನರು ನೀಡಬೇಕು’ ಎಂದಿದ್ದಾರೆ.

‘ಮೋದಿ ಅವರು ಇಡೀ ಸಮಾರಂಭವನ್ನು ರಾಜನ ಪಟ್ಟಾಭಿಷೇಕದಂತೆ ಆಚರಿಸಿದರು. ಜೊತೆಗೆ ಜನರನ್ನು ‘ಪ್ರಜೆ’ಗಳಂತೆ ಕಂಡರು’ ಎಂದು ಪ್ರಧಾನಿ ಅವರನ್ನು ಎಡಪಕ್ಷಗಳು ಟೀಕಿಸಿವೆ.

‘ಸೆಂಗೋಲ್‌ ರಾಜಪ್ರಭುತ್ವದ ಪ್ರತೀಕ. ಭಾರತದ ಜನರು ಇಂಥ ಬಂಧಗಳನ್ನು ಕಿತ್ತೊಗೆದು ಜಾತ್ಯತೀತವಾದ ಪ್ರಜಾಪ್ರಭುತ್ವವಾದಿ ಗಣರಾಜ್ಯವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಭುತ್ವದಲ್ಲಿ ಸೆಂಗೋಲ್‌ಗೆ ಯಾವ ಕೆಲಸವೂ ಇಲ್ಲ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರು ಟ್ವೀಟ್‌ ಮಾಡಿದ್ದಾರೆ.

ನೂತನ ಸಂಸತ್‌ ಭವನದ ಆಕಾರವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ

ನೂತನ ಸಂಸತ್‌ ಭವನದ ಆಕಾರವನ್ನು ಶವಪೆಟ್ಟಿಗೆಗೆ ಹೋಲಿಸಿ ಆರ್‌ಜೆಡಿ ಭಾನುವಾರ ಟ್ವೀಟ್‌ ಮಾಡಿದೆ. ನೂತನ ಸಂಸತ್‌ ಭವನ ಹಾಗೂ ಶವಪೆಟ್ಟಿಗೆಯನ್ನು ಅಕ್ಕಪಕ್ಕದಲ್ಲಿ ಇರಿಸಿ ‘ಇದು ಏನು?’ ಎಂದು ಟ್ವೀಟ್‌ ಮಾಡಿದೆ. ಇದು ವಿವಾದಕ್ಕೆ ಕಾರಣವಾಗಿದೆ.

ಭಾರತದ ಇತಿಹಾಸದಲ್ಲಿ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಂಗಾರದ ಅಕ್ಷರಗಳಲ್ಲಿ ಬರೆದಿಡಬೇಕಾದಂಥ ಸಂಭ್ರಮವಾಗಿದೆ. ದ್ರೌಪದಿ ಮುರ್ಮು ರಾಷ್ಟ್ರಪತಿ ಆತ್ಮನಿರ್ಭರ ಭಾರತದ ನಿರ್ಮಾಣದೊಂದಿಗೆ ಈ ಹೊಸ ಭವನವು ಭವಿಷ್ಯದಲ್ಲಿ ಜರುಗುವ ಐತಿಹಾಸಿಕ ಘಟನೆಗಳ ಭಾಷ್ಯ ಬರೆಯಲಿದೆ.
ಜಗದೀಪ್‌ ಧನಕರ್‌, ಉಪ ರಾಷ್ಟ್ರಪತಿ

ಆರ್‌ಜೆಡಿ ವಿರುದ್ಧ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಟೀಕಾಪ್ರಹಾರ ನಡೆಸಿವೆ. ‘2024ರ ಲೋಕಸಭಾ ಚುನಾವಣೆಯಲ್ಲಿ ಜನರು ಆರ್‌ಜೆಡಿಯನ್ನು ಮಣ್ಣುಮಾಡಲಿದ್ದಾರೆ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಆರ್‌ಜೆಡಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದೂ ಆಗ್ರಹಿಸಿದೆ.

ಈ ಭವನವು ಜನರ ಆಕಾಂಕ್ಷೆಗಳು ಪೂರ್ಣಗೊಳ್ಳುವ ಕಟ್ಟಡ ಮಾತ್ರವಲ್ಲ. ಆದರೆ ಇದು ಅಮೃತಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುವ ಪ್ರಯಾಣದ ಆರಂಭವೂ ಹೌದು
ಅಮಿತ್‌ ಶಾ, ಗೃಹ ಸಚಿವ

ಆರ್‌ಜೆಡಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಹಾರದ ಬಿಜೆಪಿ ಘಟಕವು ‘ಮೊದಲ ಚಿತ್ರವು ನಿಮ್ಮ ಭವಿಷ್ಯ ಮತ್ತು ಎರಡನೇದು ಭಾರತ. ಅರ್ಥವಾಯಿತಾ?’ ಎಂದಿದೆ. ‘ಇಷ್ಟು ಕೆಳಮಟ್ಟಗೆ ಇಳಿದಿರುವುದು ಅಸಹ್ಯಕರ. ಆರ್‌ಜೆಡಿಯ ಶವಪೆಟ್ಟಿಗೆಗೆ ಈ ಟ್ವೀಟ್‌ ಕೊನೆಯ ಮೊಳೆಯಾಗಲಿದೆ. ಭಾರತದಲ್ಲಿ ತ್ರೀಕೋನ ಅಥವಾ ತ್ರಿಭುಜಕ್ಕೆ ಮಹತ್ವ ಇದೆ. ಶವಪೆಟ್ಟಿಗೆಯು ಷಡ್ಬುಜ  ಆಕಾರದಲ್ಲಿ ಇರುತ್ತದೆ' ಎಂದು ಬಿಜೆಪಿ ವಕ್ತಾರ ಶೆಜಜಾದ್‌ ಪೂನಾವಾಲ ಟ್ವೀಟ್‌ ಮಾಡಿದ್ದಾರೆ.

‘ಆರ್‌ಜೆಡಿ ಮಾಡಿರುವ ಈ ಟ್ವೀಟ್‌ ಪ್ರಜಾಪ್ರಭುತ್ವದ ದೇವಾಲಯ ಹಾಗೂ ಜನರ ನಂಬಿಕೆಗೆ ತೀವ್ರತರವಾದ ಅಪಮಾನ ಎಸಗಿದೆ. ನೂತನ ಸಂಸತ್‌ ಭವನದ ಆಕಾರವನ್ನು ಕ್ರೈಸ್ತ ಧರ್ಮದ ಶವಪೆಟ್ಟಿಗೆಗೆ ಹೋಲಿಸುವುದು ಕೆಟ್ಟ ಯೋಚನೆಯಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಾಲ್‌ ಟ್ವೀಟ್‌ ಮಾಡಿದ್ದಾರೆ.

‘ನೂತನ ಸಂಸತ್‌ ಭವನದ ಕಟ್ಟಡದ ಆಕಾರವನ್ನು ಯಾಕಾಗಿ ಶವಪೆಟ್ಟಿಗೆಗೆ ಹೋಲಿಸಿದ್ದೀರಿ. ಬೇರೆ ರೂಪಕ ಕೊಡಬೇಕಿತ್ತು’ ಎಂದು ಎಐಎಐಎಂ ಮುಖ್ಯಸ್ಥ ಅಸಾಸುದ್ದೀನ್‌ ಓವೈಸಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT