ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್ವಾನ್‌ ವಿರುದ್ಧ ಮಗಳು, ಅಳಿಯನ ಬಂಡಾಯ

ಅಪ್ಪನ ವಿರುದ್ಧ ಸ್ಪರ್ಧೆಗೆ ಆಶಾ ಸಿದ್ಧ
Last Updated 14 ಸೆಪ್ಟೆಂಬರ್ 2018, 16:58 IST
ಅಕ್ಷರ ಗಾತ್ರ

ಪಟ್ನಾ: ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಕುಟುಂಬದೊಳಗಿನ ಜಗಳ ಈಗ ಬಯಲಿಗೆ ಬಂದಿದೆ. ತಂದೆಯ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ಪಾಸ್ವಾನ್‌ ಅವರ ಸಣ್ಣ ಮಗಳು ಆಶಾ ತೊಡೆ ತಟ್ಟಿದ್ದಾರೆ.

ಪಾಸ್ವಾನ್‌ ಅವರು ಸ್ವಜನಪಕ್ಷಪಾತಿಯಾಗಿದ್ದಾರೆ. ಅವರು ತಮ್ಮ ಮಗ ಚಿರಾಗ್‌ಗೆ ಮಾತ್ರ ಅವಕಾಶ ಕೊಡುತ್ತಿದ್ದಾರೆಎಂದು ಆಶಾ ದೂರಿದ್ದಾರೆ. ಚಿರಾಗ್‌ ಅವರು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸಂಸದೀಯ ಪಕ್ಷದ ಅಧ್ಯಕ್ಷ.

ಪಾಸ್ವಾನ್‌ ಅವರ ಮೊದಲ ಹೆಂಡತಿ ರಾಜಕುಮಾರಿ ದೇವಿ ಅವರ ಮಗಳು ಆಶಾ. 2019ರ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಆರ್‌ಜೆಡಿ ಅಭ್ಯರ್ಥಿಯಾಗಿ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಪಾಸ್ವಾನ್‌ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ಆಶಾ ಘೋಷಿಸಿದ್ದಾರೆ.

ಫತುಹಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಪುನೀತ್‌ ರಾಯ್‌ ಅವರ ಮಗ ಅನಿಲ್‌ ಕುಮಾರ್‌ ಸಾಧು ಅವರುಆಶಾ ಗಂಡ. ಎಲ್‌ಜೆಪಿ ತೊರೆದ ಸಾಧು, ಮಾರ್ಚ್‌ನಲ್ಲಿ ಆರ್‌ಜೆಡಿ ಸೇರ್ಪಡೆಯಾಗಿದ್ದಾರೆ.

ಚಿರಾಗ್‌ ಅವರು ಪಾಸ್ವಾನ್‌ ಅವರ ಎರಡನೇ ಹೆಂಡತಿ ರೀನಾ ಅವರ ಮಗ. ಪಂಜಾಬಿಯಾಗಿರುವ ರೀನಾ ಅವರನ್ನು 1983ರಲ್ಲಿ ಪಾಸ್ವಾನ್‌ ಮದುವೆಯಾಗಿದ್ದಾರೆ.

ಪಾಸ್ವಾನ್‌ ಅವರಿಗೆ ಮೊದಲ ಹೆಂಡತಿಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳ ಗಂಡ ಮೃಣಾಲ್‌ ಕೂಡ ರಾಜಕಾರಣಿ. 2015ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ಸೋತಿದ್ದರು. ಮೃಣಾಲ್‌ ಮತ್ತು ಸಾಧು ಅವರಿಬ್ಬರೂ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಅವರಿಗೆ ನಿಟಕವಾಗಿದ್ದಾರೆ. 2004ರ ಲೋಕಸಭಾ ಚುನಾವಣೆಗೆ ಮೊದಲು ಪಾಸ್ವಾನ್‌ ಮತ್ತು ಲಾಲು ನಡುವೆ ರಾಜಿ ಮಾಡುವಲ್ಲಿ ಮೃಣಾಲ್‌ ಮತ್ತು ಸಾಧು ಮಹತ್ವದ ಪಾತ್ರ ವಹಿಸಿದ್ದರು.

ಮಾವ ಪಾಸ್ವಾನ್‌ ಜತೆಗೆ ಎರಡು ವರ್ಷಗಳಿಂದ ಹಗ್ಗ ಜಗ್ಗಾಟ ನಡೆಸುತ್ತಿರುವ ಸಾಧು, ಹೆಂಡತಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್‌ ಸಿಗದಿದ್ದರೆ ಹಾಜಿಪುರದಿಂದ ಕಣಕ್ಕಿಳಿಯಲು ತಾನೂ ಸಿದ್ಧ ಎಂದು ಅವರು ಹೇಳಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಜತೆಗೆ ಎಲ್‌ಜೆಪಿ ಮೈತ್ರಿ ಮಾಡಿಕೊಂಡಿತ್ತು. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ ಆರರಲ್ಲಿ ಗೆದ್ದಿತ್ತು.

ಕುಟುಂಬ ಪ್ರಾಬಲ್ಯ

ಪಾಸ್ವಾನ್‌ ಅವರು ಹಾಜಿಪುರದ ಸಂಸದರಾಗಿದ್ದಾರೆ. ಮಗ ಚಿರಾಗ್‌, ಜಮುಯಿಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಸಮಷ್ಠಿಪುರ ಲೋಕಸಭಾ ಕ್ಷೇತ್ರದಿಂದ ಪಾಸ್ವಾನ್‌ ಸಹೋದರ ರಾಮಚಂದ್ರ ಪಾಸ್ವಾನ್‌ ಗೆದ್ದಿದ್ದಾರೆ. ಪಾಸ್ವಾನ್‌ ಅವರ ಸಣ್ಣ ತಮ್ಮ ಪಶುಪತಿ ಕುಮಾರ್‌ ಪರಸ್‌ ಅವರು ಬಿಹಾರದ ನಿತೀಶ್‌ ಕುಮಾರ್‌ ಸಚಿವ ಸಂಪುಟದಲ್ಲಿ ಪಶುಸಂಗೋಪನೆ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT