ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ವರ್ಚಸ್ಸು ರಕ್ಷಿಸಲು ‘ಸೆಲ್ಫಿ ಪಾಯಿಂಟ್‌’: ಕಾಂಗ್ರೆಸ್ ವಾಗ್ದಾಳಿ

Published 2 ಡಿಸೆಂಬರ್ 2023, 12:56 IST
Last Updated 2 ಡಿಸೆಂಬರ್ 2023, 12:56 IST
ಅಕ್ಷರ ಗಾತ್ರ

ನವದೆಹಲಿ: ‘ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಮನಸೆಳೆಯಲು ‘ಸೆಲ್ಫಿ ಪಾಯಿಂಟ್‌’ ಸ್ಥಾಪಿಸುವಂತೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚನೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. 

‘ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಕುಗ್ಗುತ್ತಿರುವ ವರ್ಚಸ್ಸು’ ರಕ್ಷಿಸಿಕೊಳ್ಳಲು ಈ ರೀತಿಯ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ‘10 ವರ್ಷಗಳ ಆಡಳಿತದ ಅಂತ್ಯದಲ್ಲಿ ‘ಹೇಸಿಗೆ ಹುಟ್ಟಿಸುವ ಈ ಸ್ವಯಂ ಪ್ರಚಾರ’ ಕುರಿತು ದೇಶದ ಜನತೆ ರೋಸಿಹೋಗಿದ್ದಾರೆ. ಶೀಘ್ರ ತಕ್ಕ ಉತ್ತರವನ್ನೂ ನೀಡಲಿದ್ದಾರೆ’ ಎಂದಿದ್ದಾರೆ.

ಸೆಲ್ಫಿ ಪಾಯಿಂಟ್ ಸ್ಥಾಪಿಸಬೇಕು ಎಂಬ ಯುಜಿಸಿ ನಿರ್ದೇಶನ ಕುರಿತ ಮಾಧ್ಯಮ ವರದಿಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ‘ಸೆಲ್ಫಿ ಪ್ರಿಯ ಮತ್ತು ಸ್ವಯಂ ಪ್ರಿಯ ನಮ್ಮ ಪ್ರಧಾನಿಗೆ ಈಗ ಲೋಕಸಭೆ ಚುನಾವಣೆ ಎದುರಿಸಲು ಅಭದ್ರತೆ ಕಾಡುತ್ತಿದೆ. ಅದಕ್ಕಾಗಿ ತಮ್ಮ ವರ್ಚಸ್ಸು ರಕ್ಷಣೆಗಾಗಿ ಎಲ್ಲ ಅವಕಾಶ ಬಳಸಿಕೊಳ್ಳುತ್ತಿದ್ದಾರೆ‘ ಎಂದಿದ್ದಾರೆ.

‘ಸೆಲ್ಫಿ ಪಾಯಿಂಟ್‌ ಸ್ಥಾಪಿಸಲು ಮೊದಲು ಸೇನೆ, ಬಳಿಕ ಐಎಎಸ್‌ ಅಧಿಕಾರಿಗಳು, ಹಿರಿಯ ಅಧಿಕಾರಿಗಳಿಗೆ ರಥಯಾತ್ರೆ ಆಯೋಜಿಸುವಂತೆ ಸೂಚಿಸಲಾಗಿತ್ತು. ಈಗ, ಯುಜಿಸಿ ಶಿಕ್ಷಣ ಸಂಸ್ಥೆಗಳಿಗೆ ಇಂತಹ ಸೂಚನೆ ನೀಡಿದೆ’ ಎಂದಿದ್ದಾರೆ.

ಇದಕ್ಕೂ ಮೊದಲು, ನೇರಪ್ರಸಾರದಲ್ಲಿ ಬರುವ ಮೂಲಕ ಚಂದ್ರಯಾನ–3 ಯಶಸ್ಸು ಹೈಜಾಕ್ ಮಾಡಿದ್ದರು. ಕೋವಿಡ್‌ ಪ್ರಮಾಣಪತ್ರದಲ್ಲಿ ತಮ್ಮ ಫೋಟೊ ಹಾಕಿಸಿಕೊಂಡಿದ್ದರು ಎಂದು ನೆನಪಿಸಿದ್ದಾರೆ.

ಸೆಲ್ಫಿ ಪಡೆದು ಜಾಲತಾಣದಲ್ಲಿ ಹಂಚಿಕೊಳ್ಳಲು ಉತ್ತೇಜನ: ಯುಜಿಸಿ  

ನವದೆಹಲಿ: ‘ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಕಾಲೇಜುಗಳ ಆಯಕಟ್ಟಿನ ಸ್ಥಳದಲ್ಲಿ ಸೆಲ್ಫಿ ಪಾಯಿಂಟ್‌ ಸ್ಥಾಪಿಸಿ ಯುವಜನರಲ್ಲಿ ದೇಶದ ಸಾಧನೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಸೂಚಿಸಿದೆ. 

ಈಗಾಗಲೇ ಕೇಂದ್ರ ಶಿಕ್ಷಣ ಸಚಿವಾಲಯವು ಅನುಮೋದನೆ ನೀಡಿರುವ 3ಡಿ ಸ್ವರೂಪದ ವಿನ್ಯಾಸದಲ್ಲೇ ಸೆಲ್ಫಿ ಪಾಯಿಂಟ್‌ ಸ್ಥಾಪಿಸಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಸೂಚಿಸಿದೆ. 

‘ಇಂತಹ ಸೆಲ್ಫಿ ಪಾಯಿಂಟ್‌ಗಳು ಹೆಮ್ಮೆ ಮೂಡಿಸುವುದಷ್ಟೇ ಅಲ್ಲ ನಾಗರಿಕರಲ್ಲಿ ದೇಶದ ಪ್ರಗತಿ ಕುರಿತು ಅರಿವು ಮೂಡಿಸಲಿದೆ. ವಿದ್ಯಾರ್ಥಿಗಳು ಸಭಿಕರು ಸೆಲ್ಫಿ ಪಡೆದು ಜಾಲತಾಣದಲ್ಲಿ ಹಂಚಿಕೊಳ್ಳಲು ಉತ್ತೇಜನವಾಗಲಿದೆ’ ಎಂದು ಯಜಿಸಿ ಕಾರ್ಯದರ್ಶಿ ಮನೀಶ್‌ ಜೋಶಿ ಅವರು ಈ ಕುರಿತ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT