ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರು ಮತ್ತು ಅವರ ಸಮಸ್ಯೆಗಳ ಕುರಿತಂತೆ ಮೋದಿ ವಿಮುಖರಾಗಿದ್ದಾರೆ: ಪ್ರಿಯಾಂಕಾ ಗಾಂಧಿ

Published 14 ಏಪ್ರಿಲ್ 2024, 11:02 IST
Last Updated 14 ಏಪ್ರಿಲ್ 2024, 11:02 IST
ಅಕ್ಷರ ಗಾತ್ರ

ಜೈಪುರ: ಜನರು ಮತ್ತು ಅವರ ಸಮಸ್ಯೆಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಮುಖರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅತಿಯಾಗಿ ಅಧಿಕಾರ ಬಳಸುತ್ತಿದ್ದಾರೆ. ಹಾಗಾಗಿ, ಅವರ ಸುತ್ತಲಿನ ಜನ ಅವರಿಗೆ ಸತ್ಯ ತಿಳಿಸಲು ಹೆದರುತ್ತಿದ್ದಾರೆ ಎಂದಿದ್ದಾರೆ.

‘ಜನರ ದೊಡ್ಡ ಸಮಸ್ಯೆ ಹಣದುಬ್ಬರ. ಮೋದಿಜೀಯವರು ಅದನ್ನು ಅರ್ಥ ಮಾಡಿಕೊಂಡಿಲ್ಲ ಎಂದು ನನಗನಿಸುತ್ತದೆ. ಅತಿಯಾದ ಅಧಿಕಾರದ ಚಲಾವಣೆ ಇದ್ದಾಗ ಸುತ್ತಲಿನ ಜನ ಸತ್ಯ ಹೇಳಲಾರರು. ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ವಾಸ್ತವ ಪರಿಸ್ಥಿತಿ ಬಗ್ಗೆ ಅವರಿಗೆ ತಿಳಿಸಲು ಭಯಪಡುತ್ತಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ರಾಜಸ್ಥಾನದ ಜಲೋರ್ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಮಗ, ಕಾಂಗ್ರೆಸ್ ಅಭ್ಯರ್ಥಿ ವೈಭವ್ ಗೆಹಲೋತ್ ಪರ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮೋದಿ ಈಗ ಸಂಪೂರ್ಣ ದೇಶದ ಜನರ ಸಂಪರ್ಕ ಕಡಿದುಕೊಂಡಿದ್ದಾರೆ’ ಎಂದು ನನಗನಿಸುತ್ತದೆ ಎಂದೂ ಅವರು ಹೇಳಿದ್ದಾರೆ.

ಹಣದುಬ್ಬರ ಮತ್ತು ನಿರುದ್ಯೋಗದಂತಹ ಎರಡು ಬೃಹತ್ ಸಮಸ್ಯೆಗಳು ಈಗ ದೇಶವನ್ನು ಕಾಡುತ್ತಿವೆ. ಆದರೆ, ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ ಎಂದಿದ್ದಾರೆ.

‘ನಮ್ಮ ದೇಶದಲ್ಲಿ ಜಿ–20 ಶೃಂಗಸಭೆ ನಡೆದಾಗ ನಮಗೆ ಹೆಮ್ಮೆ ಎನಿಸಿತು. ಆದರೆ, ಮತ್ತೊಂದು ಕಡೆ ಹಣದುಬ್ಬರದಿಂದ ಜನ ತತ್ತರಿಸುತ್ತಿದ್ದರೆ, ನಿರುದ್ಯೋಗಿ ಯುವಕರು ಪರಿತಪಿಸುತ್ತಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದರು.

ಭಾರತೀಯ ಜನತಾ ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿಲ್ಲ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಏಪ್ರಿಲ್ 26ರಂದು ಜಲೋರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT