ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಎಂಕೆಯಿಂದ ದೇಶ, ಬಾಹ್ಯಾಕಾಶ ವಿಜ್ಞಾನಿಗಳಿಗೆ ಅವಮಾನ: ಮೋದಿ

Published 28 ಫೆಬ್ರುವರಿ 2024, 15:24 IST
Last Updated 28 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ತೂತ್ತುಕುಡಿ(ತಮಿಳುನಾಡು): ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ಇಸ್ರೊದ ರಾಕೆಟ್‌ ಉಡ್ಡಯನ ನೆಲೆ ಶಂಕುಸ್ಥಾಪನೆ ಕಾರ್ಯಕ್ರಮ ಕುರಿತು ಬುಧವಾರ ಪ್ರಕಟವಾಗಿರುವ ಜಾಹೀರಾತುಗಳು ಭಾರಿ ವಿವಾದಕ್ಕೆ ಕಾರಣವಾಗಿವೆ.

ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯ ರಾಜ್ಯ ಘಟಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಇದು ದೇಶದ ವಿಜ್ಞಾನಿಗಳಿಗೆ ಹಾಗೂ ಬಾಹ್ಯಾಕಾಶ ಕಾರ್ಯಕ್ರಮ ಮಾಡಿದ ಅವಮಾನ’ ಎಂದು ಮೋದಿ ಟೀಕಿಸಿದ್ದಾರೆ.

ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಮಿಳುನಾಡು ಮೀನುಗಾರಿಕೆ ಸಚಿವೆ ಅನಿತಾ ರಾಧಾಕೃಷ್ಣನ್ ನೀಡಿರುವ ಜಾಹೀರಾತುಗಳು ತಮಿಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಭಾವಚಿತ್ರಗಳ ಜೊತೆಗೆ ರಾಕೆಟ್‌ವೊಂದರ ಚಿತ್ರವೂ ಜಾಹೀರಾತಿನಲ್ಲಿದೆ. ಆದರೆ, ರಾಕೆಟ್‌ನ ತುದಿಯಲ್ಲಿ ಚೀನಾ ಬಾವುಟ ಹಾಗೂ ಚೀನಿ ಅಕ್ಷರಗಳಿವೆ ಎಂಬ ಆರೋಪವೇ ವಿವಾದದ ಮೂಲ.

‘ಕುಲಶೇಖರಪಟ್ಟಿಣಂನಲ್ಲಿ ಇಸ್ರೊ ಸಂಕೀರ್ಣ ಸ್ಥಾಪನೆಯ ಶ್ರೇಯಸ್ಸನ್ನು ತಾನು ಪಡೆಯುವ ಸಲುವಾಗಿ ಡಿಎಂಕೆ, ಜಾಹೀರಾತಿನಲ್ಲಿ ಚೀನಾ ಬಾವುಟ ಹಾಗೂ ಭಾಷೆಯನ್ನು ಬಳಸಿಕೊಂಡಿದೆ’ ಬಿಜೆಪಿಯ ರಾಜ್ಯ ಘಟಕ ಆರೋಪಿಸಿದೆ.

ಈ ಜಾಹೀರಾತಿನ ಚಿತ್ರವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ತಮ್ಮ ‘ಎಕ್ಸ್‌’ಯಲ್ಲಿ ಹಂಚಿಕೊಂಡಿದ್ದು, ‘ಇದು, ಡಿಎಂಕೆ ಪಕ್ಷವು ಚೀನಾ ಕುರಿತ ಹೊಂದಿರುವ ನಿಷ್ಠೆ ಹಾಗೂ ಭಾರತದ ಸಾರ್ವಭೌಮತೆಗೆ ತೋರುತ್ತಿರುವ ಅಗೌರವವನ್ನು ತೋರುತ್ತದೆ’ ಎಂದು ಆರೋಪಿಸಿದ್ದರು.

₹17,300 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತೂತ್ತುಕುಡಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ, ಮೋದಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಡಿಎಂಕೆ ಲೋಕಸಭಾ ಸಂಸದೆ ಕನಿಮೋಳಿ ಹಾಗೂ ತಮಿಳುನಾಡು ಲೋಕೋಪಯೋಗಿ ಸಚಿವ ಇ.ವಿ.ವೇಲು ಪಾಲ್ಗೊಂಡಿದ್ದರು. 

ನಂತರ, ತಿರುನೆಲ್ವೇಲಿಯಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಜಾಹೀರಾತು ವಿಷಯವನ್ನು ಪ್ರಸ್ತಾಪಿಸಿ ಡಿಎಂಕೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

‘ಕೇಂದ್ರ ಜಾರಿಗೊಳಿಸುವ ಯೋಜನೆಗಳಿಗೆ ತನ್ನ ಸ್ಟಿಕರ್‌ ಅಂಟಿಸುವ ಮೂಲಕ ಡಿಎಂಕೆ ಸರ್ಕಾರವು ಶ್ರೇಯಸ್ಸು ತನ್ನದೆಂದು ಹೇಳಿಕೊಳ್ಳುತ್ತಿದೆ’ ಎಂದು ಮೋದಿ ಟೀಕಿಸಿದರು.

‘ಡಿಎಂಕೆ ನಾಯಕರು ಈಗ ಎಲ್ಲೆ ಮೀರಿದ್ದಾರೆ. ತಮಿಳುನಾಡಿನಲ್ಲಿ ಇಸ್ರೊದ ರಾಕೆಟ್‌ ಉಡ್ಡಯನ ನೆಲೆ ಸ್ಥಾ‍ಪನೆಯ ಶ್ರೇಯಸ್ಸು ತನ್ನದಾಗಿಸಿಕೊಳ್ಳಲು ಮುಂದಾಗಿರುವ ಡಿಎಂಕೆ, ಇದಕ್ಕಾಗಿ ಚೀನಾ ಸ್ಟಿಕರ್ ಬಳಸಿಕೊಂಡಿದೆ’ ಎಂದಿದ್ದಾರೆ.

‘ಡಿಎಂಕೆ ನಾಯಕ ಈ ನಡೆ, ದೇಶಕ್ಕೆ ಹಾಗೂ ದೇಶಪ್ರೇಮಿಗಳಾದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮಾಡಿರುವ ಅವಮಾನ. ಡಿಎಂಕೆಯ ಎಲ್ಲ ಅನ್ಯಾಯದ ಕೆಲಸಗಳಿಗೆ ಅದನ್ನು ಶಿಕ್ಷಿಸಲು ಇದು ಸರಿಯಾದ ಸಮಯ’ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮ ಮಂದಿರ ಪ್ರಸ್ತಾಪ: ರಾಮ ಮಂದಿರ ವಿಷಯ ಪ್ರಸ್ತಾಪಿಸಿದ ಮೋದಿ, ‘ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಎಂಕೆ ಸಂಸದರು ಸಭಾತ್ಯಾಗ ಮಾಡಿದರು. ಡಿಎಂಕೆ ನಾಯಕರು ಜನರ ನಂಬಿಕೆಯನ್ನು ದ್ವೇಷ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಯಿತು’ ಎಂದು ಟೀಕಿಸಿದ್ದಾರೆ.

‘ತಮಿಳುನಾಡು ಮತ್ತು ಶ್ರೀರಾಮನಿಗೂ ಇರುವ ನಂಟು ಎಲ್ಲರಿಗೂ ಗೊತ್ತಿದೆ. ಜ.22ರಂದು ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ತಮಿಳುನಾಡಿನ ಧನುಷ್ಕೋಟಿ ಸೇರಿದಂತೆ ದೇಶದ ವಿವಿಧ ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೆ. ಭವ್ಯ ರಾಮ ಮಂದಿರ ತಲೆ ಎತ್ತುತ್ತಿರುವುದಕ್ಕೆ ಇಡೀ ದೇಶವೇ ಸಂತಸಪಡುತ್ತಿದ್ದರೆ, ಡಿಎಂಕೆ ಸಂಸದರು ಮಾತ್ರ ಈ ವಿಷಯ ಕುರಿತ ಚರ್ಚೆಯಿಂದ ಪಲಾಯನ ಮಾಡಿದರು’ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷವು ಈ ಹಿಂದೆ ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರದ ಭಾಗವಾಗಿತ್ತು. ಆದಾಗ್ಯೂ, ರಾಜ್ಯದ ಅಭಿವೃದ್ಧಿಗೆ ಡಿಎಂಕೆ ನಾಯಕರು ಗಮನ ಹರಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

₹17,300 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಈಗ ಶಂಕುಸ್ಥಾಪನೆ ನೆರವೇರಿಸಿರುವ ಯೋಜನೆಗಳು ಇಲ್ಲಿನ ಜನರ ಬಹುದಶಕಗಳ ಬೇಡಿಕೆಗಳೇ ಆಗಿದ್ದವು. ಈ ಮಾತು ಕಹಿ ಎನಿಸಿದರೂ, ಈ ಸತ್ಯ ಸಂಗತಿಯನ್ನು ನಾನು ತಮಿಳುನಾಡು ಹಾಗೂ ದೇಶದ ಜನರಿಗೆ ತಿಳಿಸಲೇಬೇಕಿದೆ’ ಎಂದು ಮೋದಿ ಹೇಳಿದರು.

‘ಅಭಿವೃದ್ಧಿ ವಿಚಾರದಲ್ಲಿ ತಮಿಳುನಾಡು ಹೊಸ ಅಧ್ಯಾಯ ರಚಿಸುತ್ತಿದೆ. ಅಲ್ಲದೇ, ಕೇಂದ್ರ ಸರ್ಕಾರದ ಪ್ರಯತ್ನಗಳ ಫಲವಾಗಿ ರಾಜ್ಯವು ಆಧುನಿಕ ಸಂಪರ್ಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ’ ಎಂದರು.

‘ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಲು ದಿನಪತ್ರಿಕೆಗಳೂ ಹಾಗೂ ಟಿವಿ ವಾಹಿನಿಗಳು ಮುಂದಾಗಿದ್ದವು. ಆದರೆ, ಇಂತಹ ಕಾರ್ಯಕ್ಕೆ ಇಲ್ಲಿನ ಸರ್ಕಾರ ಅವಕಾಶ ನೀಡಲಿಲ್ಲ. ಆದರೆ, ಇಲ್ಲಿನ ಸರ್ಕಾರದ ಇಂತಹ ನಡೆಗಳಿಂದ ಅಭಿವೃದ್ಧಿ ಕಾರ್ಯ ಮಾಡುವುದನ್ನು ನಾವು ನಿಲ್ಲಿಸುವುದಿಲ್ಲ’ ಎಂದು ಡಿಎಂಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಡಿಎಂಕೆ ಲೋಕಸಭಾ ಸಂಸದೆ ಕನಿಮೋಳಿ ಹಾಗೂ ತಮಿಳುನಾಡು ಲೋಕೋಪಯೋಗಿ ಸಚಿವ ಇ.ವಿ.ವೇಲು ಈ ವೇಳೆ ವೇದಿಕೆಯಲ್ಲಿದ್ದರು.

‘ಕಳೆದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ 1,300 ಕಿ.ಮೀ.ನಷ್ಟು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಇದೇ ಅವಧಿಯಲ್ಲಿ 2 ಸಾವಿರ ಕಿ.ಮೀ. ಉದ್ದದ ರೈಲು ಮಾರ್ಗದ ವಿದ್ಯುದೀಕರಣವಾಗಿದೆ’ ಎಂದು ಮೋದಿ ಹೇಳಿದರು.

ಸತೀಶ್‌ ಧವನ್ ಬಾಹ್ಯಾಕಾಶ್ ಕೇಂದ್ರ ತಮಿಳುನಾಡು ಬದಲು ಆಂಧ್ರಪ್ರದೇಶದಲ್ಲಿ ಸ್ಥಾಪನೆಯಾಗಲು ಡಿಎಂಕೆ ಕಾರಣ. ಡಿಎಂಕೆ ಧೋರಣೆಯಲ್ಲಿ ಏನೂ ಬದಲಾವಣೆಯಾಗಿಲ್ಲ
ಕೆ.ಅಣ್ಣಾಮಲೈ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT