ನವದೆಹಲಿ: ‘ಕೌರವರು ದ್ರೌಪದಿಗೆ ಅವಮಾನಿಸಿದ್ದರಿಂದ ‘ಮಹಾಭಾರತ’ ನಡೆಯಿತು. ಮಣಿಪುರದಲ್ಲಿ ಇಂತಹ ನೂರಾರು ದ್ರೌಪದಿಯರ ಕಣ್ಣೀರಿನ ಕಥೆಗಳಿವೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರೊಬ್ಬರ ಪತ್ನಿಯನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಅವರ ಸಂಕಟ ಕೇಳಿಸಿಕೊಳ್ಳದಿರುವ ನಿಮ್ಮದು ಕಲ್ಲು ಹೃದಯವೇ...’
–ಹೀಗೆಂದು ಸಂಸತ್‌ನಲ್ಲಿ ಹೇಳಿಕೆ ನೀಡಲು ಹಿಂಜರಿಕೆ ತೋರಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಇಂಡಿಯಾ’ ತರಾಟೆಗೆ ತೆಗೆದುಕೊಂಡಿದೆ.
ಮುಂಗಾರು ಅಧಿವೇಶನ ಶುರುವಾಗಿ ಎಂಟು ದಿನಗಳಾಗಿವೆ. ಆದರೆ, ಪ್ರಧಾನಿ ಅವರು ಕಲಾಪದಿಂದ ದೂರ ಉಳಿದಿದ್ದಾರೆ. ಆ ಮೂಲಕ ಸಂಸತ್‌ನ ತೇಜೋವಧೆಗೆ ಇಳಿದಿದ್ದಾರೆ ಎಂದು ಟೀಕಿಸಿದೆ.
ಸಂವಿಧಾನದ 75ನೇ ವಿಧಿ ಅನ್ವಯ ಸಂಸತ್‌ಗೆ ಉತ್ತರ ನೀಡುವುದು ಪ್ರಧಾನಿಯ ಜವಾಬ್ದಾರಿ. ಹಾಗಾಗಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಬೇಕಿದೆ. ಬಳಿಕ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ಆಗ್ರಹಿಸಿದೆ.
ನಿಯಮ 176ರ ಅಡಿ ಕೇವಲ ಒಂದೂವರೆ ಗಂಟೆ ಅಥವಾ ಎರಡು ಗಂಟೆಯ ಚರ್ಚೆಗೆ ನಾವು ಸಿದ್ಧವಿಲ್ಲ. ನಮಗೆ ಬ್ರೆಡ್ ಟೋಸ್ಟ್ ಬೇಡ; ಭರ್ಜರಿ ಭೋಜನ ಬೇಕು. ಹಾಗಾಗಿ, ಕಲಾಪದಲ್ಲಿನ ಎಲ್ಲಾ ವಿಷಯಗಳನ್ನು ಬದಿಗೊತ್ತಿ ನಿಯಮ 267ರ ಅಡಿ ಸುದೀರ್ಘ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದೆ.
ಕಣಿವೆ ರಾಜ್ಯದಲ್ಲಿ ಎಷ್ಟು ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗಿದ್ದಾರೆ ಎಂಬುದು ತಿಳಿದಿಲ್ಲ. ಜನರ ಸಾವಿನ ಬಗ್ಗೆ ಸತ್ಯ ತಿಳಿಯಬೇಕಿದೆ. ಸಂಸತ್‌ಗೆ ಅವಮಾನ ಮಾಡುವುದು ದೇಶದ 130 ಕೋಟಿ ಜನರನ್ನು ಅವಮಾನಿಸಿದಂತೆ. ಆದರೆ, ಮೋದಿ ಅವರು ಏನನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಉಪ ನಾಯಕ ಪ್ರಮೋದ್ ತಿವಾರಿ ದೂರಿದ್ದಾರೆ.
ಟಿಎಂಸಿ ನಾಯಕ ಡೆರೆಕ್ ಒಬ್ರಯಾನ್, ‘ಮೋದಿ ಅವರು ಕನಿಷ್ಠ 20 ಸೆಕೆಂಡ್ ಕಾಲವೂ ಸಂಸತ್‌ಗೆ ಭೇಟಿ ನೀಡಿಲ್ಲ. ನಾವು ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ಪ್ರಧಾನಿ ಏಕೆ ಸದನಕ್ಕೆ ಬರುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದು ಟೀಕಿಸಿದ್ದಾರೆ.
ಪ್ರಧಾನಿಗಳಾಗಿದ್ದ ನೆಹರೂ, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ ಸಿಂಗ್ ಅವರು ರಾಜ್ಯಸಭೆಯ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ. ಬೋಪೋರ್ಸ್ ಹಗರಣದಲ್ಲಿ ತಮ್ಮ ಮೇಲೆ ಆರೋಪ ಕೇಳಿಬಂದಾಗ ರಾಜೀವ್ ಗಾಂಧಿ ಧೈರ್ಯವಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಮೋದಿ ಅವರು ಧಾರ್ಷ್ಟ್ಯತನ ತೋರುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.