ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಧಾನಿ ಮೋದಿ ದೊಡ್ಡಣ್ಣನಿದ್ದಂತೆ': ಅಭಿವೃದ್ಧಿಗೆ ಸಹಕಾರ ಕೋರಿದ ತೆಲಂಗಾಣ ಸಿಎಂ

Published 4 ಮಾರ್ಚ್ 2024, 14:28 IST
Last Updated 4 ಮಾರ್ಚ್ 2024, 14:28 IST
ಅಕ್ಷರ ಗಾತ್ರ

ಆದಿಲಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ದೊಡ್ಡಣ್ಣ ಎಂದು ಕರೆದಿರುವ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ, ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದ ಬದಲು, ಉತ್ತಮ ಸಂಬಂಧ ಮುಂದುವರಿಸುವ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ತೆಲಂಗಾಣದಲ್ಲಿ ₹ 56,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಇಂದು (ಸೋಮವಾರ)  ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರೆಡ್ಡಿ, ಗುಜರಾತ್‌ನಂತೆಯೇ ತೆಲಂಗಾಣವನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡುವಂತೆ ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.

'ತೆಲಂಗಾಣ ರಾಜಧಾನಿ ಹೈದರಾಬಾದ್‌, ದೇಶದ 5ನೇ ಅತಿದೊಡ್ಡ ನಗರವಾಗಿದೆ. ದೇಶದ ಆರ್ಥಿಕತೆಯನ್ನು 5 ಶತಕೋಟಿ ಡಾಲರ್‌ಗೆ ಕೊಂಡೊಯ್ಯುವ ಪ್ರಧಾನಿಯವರ ಮಹತ್ವಾಕಾಂಕ್ಷೆಗೆ ಕೊಡುಗೆ ನೀಡಲಿದೆ' ಎಂದಿದ್ದಾರೆ.

ಇದರೊಂದಿಗೆ ತೆಲಂಗಾಣ ಮುಖ್ಯಮಂತ್ರಿಯವರು ಬಹುದಿನಗಳ ನಂತರ ಮೋದಿ ಅವರನ್ನು ಸ್ವಾಗತಿಸಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಂತಾಗಿದೆ. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್‌ಆರ್‌ ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ್‌ ರಾವ್‌ ಅವರು, ಪ್ರಧಾನಿ ರಾಜ್ಯಕ್ಕೆ ಬಂದಿದ್ದ ಹಲವು ಸಂದರ್ಭಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದರು.

ಕಾಂಗ್ರೆಸ್‌ ಮುಖ್ಯಮಂತ್ರಿಯಾಗಿರುವ ರೆಡ್ಡಿ, 'ನರೇಂದ್ರ ಮೋದಿಯವರೇ, ನನ್ನ ಪ್ರಕಾರ ಪ್ರಧಾನಿಯೆಂದರೆ ನಮ್ಮ ದೊಡ್ಡಣ್ಣನಿದ್ದಂತೆ. ದೊಡ್ಡಣ್ಣನ ಬೆಂಬಲವಿದ್ದರಷ್ಟೇ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಸಾಧ್ಯ' ಎಂದಿದ್ದಾರೆ.

'ನನ್ನ ಮನವಿ ಏನೆಂದರೆ, ಗುಜರಾತ್‌ನಂತೆ ತೆಲಂಗಾಣ ಅಭಿವೃದ್ಧಿ ಹೊಂದಬೇಕಾದರೆ ನಿಮ್ಮ ಬೆಂಬಲ ಅತ್ಯಗತ್ಯ' ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಪ್ರಧಾನಿ, ಎನ್‌ಡಿಎ ಸರ್ಕಾರ ಹಾಗೂ ತೆಲಂಗಾಣ ರಾಜ್ಯ – ಎರಡೂ ಹತ್ತು ವರ್ಷ ಪೂರೈಸಿವೆ. ರಾಜ್ಯದ ಜನರ ಕನಸುಗಳ ಈಡೇರಿಕೆ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT