ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೆಚ್ಚರಿಕೆ ಕಾರಣಕ್ಕೆ ವ್ಯಕ್ತಿಯ ಬಂಧನ ತೀರಾ ಕಠಿಣ ಕ್ರಮ: ಸುಪ್ರೀಂಕೋರ್ಟ್

Published 23 ಮಾರ್ಚ್ 2024, 14:54 IST
Last Updated 23 ಮಾರ್ಚ್ 2024, 14:54 IST
ಅಕ್ಷರ ಗಾತ್ರ

ನವದೆಹಲಿ: 'ಮುನ್ನೆಚ್ಚರಿಕೆಯ ಕಾರಣಕ್ಕೆ ವ್ಯಕ್ತಿಯನ್ನು ಬಂಧಿಸುವುದು ತೀರಾ ಕಠಿಣವಾದ ಕ್ರಮ. ಈ ಅಧಿಕಾರವನ್ನು ಮನಸ್ಸಿಗೆ ಬಂದ ಬಗೆಯಲ್ಲಿ ಬಳಸುವುದನ್ನು ಅಥವಾ ತೀರಾ ಸಹಜವಾಗಿ ಬಳಕೆ ಮಾಡುವ ಪ್ರವೃತ್ತಿಯನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬಂಧಿತ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ತೆಲಂಗಾಣ ಹೈಕೋರ್ಟ್ ಕ್ರಮವನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದೆ. 'ಮುನ್ನೆಚ್ಚರಿಕೆಯ ಬಂಧನದ ಉದ್ದೇಶವು, ವ್ಯಕ್ತಿಯೊಬ್ಬ ಎಸಗಿದ ಕೃತ್ಯಕ್ಕೆ ಆತನನ್ನು ಶಿಕ್ಷಿಸುವುದಲ್ಲ; ಬದಲಿಗೆ, ಆತ ತಪ್ಪು ಮಾಡುವುದನ್ನು ತಡೆಯುವುದು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಹೇಳಿದೆ.

‘ರಾಜ್ಯದ ಪೊಲೀಸ್ ವ್ಯವಸ್ಥೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪರಿಸ್ಥಿತಿಯನ್ನು ನಿರ್ವಹಿಸಲು ಆಗುವುದಿಲ್ಲ ಎನ್ನುವುದು ಮುನ್ನೆಚ್ಚರಿಕೆಯ ಬಂಧನಕ್ಕೆ ಮುಂದಾಗುವುದಕ್ಕೆ ನೆಪ ಆಗಬಾರದು’ ಎಂದು ಪೀಠವು ಹೇಳಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದರು.

‘ಮುನ್ನೆಚ್ಚರಿಕೆಯ ಬಂಧನ ಎಂಬುದು ತೀರಾ ನಿರ್ದಯವಾದ ಕ್ರಮ. ಹೀಗಾಗಿ, ಅಧಿಕಾರವನ್ನು ಮನಸ್ಸಿಗೆ ಬಂದ ಬಗೆಯಲ್ಲಿ ಬಳಸಿ ಅಥವಾ ತೀರಾ ಸಹಜವಾಗಿ ಬಳಸಿ ಬಂಧನಕ್ಕೆ ಆದೇಶಿಸುವುದುನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು’ ಎಂದು ಪೀಠವು ಹೇಳಿದೆ.

ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿಯನ್ನು ‘ತೆಲಂಗಾಣ ಅಪಾಯಕಾರಿ ಕೃತ್ಯಗಳ ನಿಯಂತ್ರಣ ಕಾಯ್ದೆ–1986’ ಅಡಿಯಲ್ಲಿ, ರಾಚಕೊಂಡ ಪೊಲೀಸ್ ಆಯುಕ್ತರ ಆದೇಶದ ಅನುಸಾರ ತೆಲಂಗಾಣದಲ್ಲಿ 2023ರ ಸೆಪ್ಟಂಬರ್ 12ರಂದು ಬಂಧಿಸಲಾಗಿತ್ತು. ಬಂಧನ ಆದೇಶವನ್ನು ರದ್ದು ಮಾಡಬೇಕು ಎಂಬ ಕೋರಿಕೆಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿತ್ತು.

ಯಾವುದೇ ಕಾಯ್ದೆಯ ಅಡಿಯಲ್ಲಿನ ‘ಮುನ್ನೆಚ್ಚರಿಕೆಯ ಬಂಧನ’ ಆದೇಶವನ್ನು ಅತ್ಯಂತ ಜಾಗರೂಕತೆಯಿಂದ, ಸಂಯಮದಿಂದ ಬಳಕೆ ಮಾಡಬೇಕು ಎಂಬುದು ಈಗಾಗಲೇ ಒಪ್ಪಿತವಾಗಿರುವ ಸಂಗತಿ ಎಂದು ಪೀಠವು ಹೇಳಿದೆ. 

‘ದರೋಡೆಯಂತಹ ಆರೋಪಗಳಿಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳು ದಾಖಲಾಗಿವೆ ಎಂಬುದು, ಆ ವ್ಯಕ್ತಿಯು ಗೂಂಡಾ ಎಂದು ಭಾವಿಸಿ 1986ರ ಕಾಯ್ದೆಯನ್ನು ಬಳಸಿ ಮುನ್ನೆಚ್ಚರಿಕೆಯ ಕ್ರಮವಾಗಿ ವ್ಯಕ್ತಿಯನ್ನು ಬಂಧಿಸುವುದಕ್ಕೆ ಆಧಾರ ಆಗಬೇಕಿರಲಿಲ್ಲ ಎಂಬುದು ನಮ್ಮ ಅಭಿಪ್ರಾಯ’ ಎಂದು ಪೀಠವು ಈಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT