ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರಕ್ಕೆ ಭೇಟಿ ನೀಡಿ, ಜನರ ಕಷ್ಟಗಳಿಗೆ ಕಿವಿಯಾಗಿ: ಮೋದಿಗೆ ರಾಹುಲ್

ಪ್ರಧಾನಿ ಮೋದಿ ಅವರಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮನವಿ
Published 8 ಜುಲೈ 2024, 16:42 IST
Last Updated 8 ಜುಲೈ 2024, 16:42 IST
ಅಕ್ಷರ ಗಾತ್ರ

ಬೆಂಗಳೂರು/ಇಂಫಾಲ:‘ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅವಶ್ಯವಾಗಿ ಭೇಟಿ ನೀಡಬೇಕು. ಎರಡು ಅಥವಾ ಮೂರು ದಿನ ಬಿಡುವು ಮಾಡಿಕೊಳ್ಳಿ. ಇಲ್ಲಿನ ಜನರ ಕಷ್ಟಕ್ಕೆ, ಅವರ ಮಾತುಗಳಿಗೆ ಕಿವಿಯಾಗಿ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದರು.

ಜನಾಂಗೀಯ ಸಂಘರ್ಷ ಪೀಡಿತ ಮಣಿಪುರಕ್ಕೆ ರಾಹುಲ್‌ ಅವರು ಸೋಮವಾರ ಭೇಟಿ ನೀಡಿದರು. ಮಣಿಪುರಕ್ಕೆ ಇದು ಅವರ ಮೂರನೇ ಭೇಟಿಯಾಗಿದೆ. ಜಿರಿಬಾಮ್‌, ಚುರಾಚಾಂದ್‌ಪುರ ಹಾಗೂ ವಿಷ್ಣುಪುರ ಜಿಲ್ಲೆಗಳಲ್ಲಿರುವ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿ, ಜನರ ಕಷ್ಟ ಆಲಿಸಿದರು. ಈ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಮಣಿಪುರ ಭಾರತದ ಒಂದು ಪ್ರದೇಶ. ಈ ಮೊದಲೇ ಪ್ರಧಾನಿ ಮೋದಿ ಅವರು ಇಲ್ಲಿಗೆ ಭೇಟಿ ನೀಡಬೇಕಿತ್ತು. ಈಗಲಾದರೂ ಭೇಟಿ ನೀಡಿ. ಇಲ್ಲಿನ ಜನರಿಗೆ ಇದರ ಅವಶ್ಯಕತೆ ಇದೆ. ನೀವು ಇಲ್ಲಿಗೆ ಭೇಟಿ ನೀಡುವುದನ್ನು ಅವರು ಬಯಸುತ್ತಿದ್ದಾರೆ’ ಎಂದರು.

‘ನಾನು ಇಲ್ಲಿಗೆ ಮೂರನೇ ಬಾರಿ ಬರುತ್ತಿದ್ದೇನೆ. ಪರಿಸ್ಥಿತಿಯಲ್ಲಿ ಬದಲಾವಣೆ ಆಗಿರಬಹುದು ಎಂದುಕೊಂಡಿದ್ದೆ. ಆದರೆ, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಬದಲಾವಣೆಯಾಗಿಲ್ಲ. ನನಗೆ ಬಹಳ ನಿರಾಶೆಯಾಗಿದೆ. ವಿರೋಧ ಪಕ್ಷದ ನಾಯಕನಾಗಿ ನಾನು ಸರ್ಕಾರದ ಮೇಲೆ ಏನೆಲ್ಲಾ ಒತ್ತಡ ಹೇರಬಹುದೋ ಎಲ್ಲವನ್ನೂ ಮಾಡುತ್ತೇನೆ’ ಎಂದರು

ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಿದ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ ರಾಹುಲ್‌, ‘ರಾಜ್ಯದಲ್ಲಿ ಶಾಂತಿ ನೆಲಸಲು ಅಗತ್ಯವಿರುವ ಎಲ್ಲವನ್ನೂ ಮಾಡಲು ಕಾಂಗ್ರೆಸ್‌ ಸಿದ್ಧವಿದೆ. ಆದರೆ, ಮಣಿಪುರಲ್ಲಿ ಆಗಿರುವ ಪರಿಹಾರಾತ್ಮಕ ಕಾರ್ಯಗಳ ಬಗ್ಗೆ ಪಕ್ಷಕ್ಕೆ ಸಮಾಧಾನವಿಲ್ಲ’ ಎಂದು ತಿಳಿಸಿದ್ದಾಗಿ ಹೇಳಿದರು. ಸುಮಾರು 45 ನಿಮಿಷಗಳ ವರೆಗೆ ರಾಹುಲ್‌ ಹಾಗೂ ರಾಜ್ಯಪಾಲರ ಮಾತುಕತೆ ನಡೆದಿತ್ತು.  

ರಾಹುಲ್‌ ಅವರ ಭೇಟಿಯ ಕುರಿತು ಮಾತನಾಡಿದ ಇಲ್ಲಿನ ಕಾಂಗ್ರೆಸ್‌ ಅಧ್ಯಕ್ಷ ಕೆ. ಮೇಘಾಚಂದ್ರ, ‘ಜನರು ಅವರ ಕಷ್ಟಗಳನ್ನು ವಿವರಿಸಿದರು. ಜನರಿಗೆ ಏನು ಬೇಕು ಎಂಬುದರ ಬಗ್ಗೆ ರಾಹುಲ್‌ ಅವರು ವಿಚಾರಿಸಿದರು. ಜಿರಿಬಮ್‌ನಲ್ಲಿ ಸಾವಿರಾರು ಮಂದಿ ರಾಹುಲ್ ಅವರನ್ನು ನೋಡಲು ಬಂದಿದ್ದರು. ಜೊತೆಗೆ, ರಾಹುಲ್‌ ಅವರೊಂದಿಗೆ ಕಷ್ಟಗಳನ್ನು ಹಂಚಿಕೊಳ್ಳುತ್ತಾ ಕೆಲವರು ಕಣ್ತುಂಬಿಕೊಂಡರು’ ಎಂದು ಮಾಹಿತಿ ನೀಡಿದರು.

ಭಾರತ ಸರ್ಕಾರವಾಗಲಿ ತಮ್ಮನ್ನು ತಾವು ದೇಶಭಕ್ತರು ಎಂದು ಕರೆದುಕೊಳ್ಳುವ ಯಾರೇ ಆಗಲಿ ಮಣಿಪುರಕ್ಕೆ ಒಮ್ಮೆ ಭೇಟಿ ನೀಡಿ
ರಾಹುಲ್‌ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ

‘ಭ್ರಾತೃತ್ವ ಬಗ್ಗೆ ಯೋಚಿಸಿ’ 

ನಾನು ನಿಮ್ಮ ಸಹೋದರನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ ರಾಹುಲ್‌ ಗಾಂಧಿ ‘ಪ್ರೀತಿ ಸೌಹಾರ್ದ ಭ್ರಾತೃತ್ವದ ಕುರಿತು ಯೋಚಿಸಿ. ಹಿಂಸೆಯು ಯಾವುದೇ ಕಾರಣಕ್ಕೂ ಪರಿಹಾರವಾಗಲಾರದು. ನೀವು ನನ್ನನ್ನು ಎಷ್ಟು ಬಾರಿ ಕರೆಸಿಕೊಂಡರೂ ಇಲ್ಲಿಗೆ ಬರಲು ನಾನು ಸಿದ್ಧನಿದ್ದೇನೆ. ವಿರೋಧ ಪಕ್ಷದ ನಾಯಕನಾಗಿಯೂ ನಿಮಗೆ ಸಹಾಯ ಮಾಡಲಿದ್ದೇನೆ’ ಎಂದು ಮಣಿಪುರಕ್ಕೆ ಸಂದೇಶ ನೀಡಿದರು.

‘ಬಾಲಕ ಬುದ್ಧಿ’ಯ ದುರಂತ ಪ್ರವಾಸ

ರಾಹುಲ್‌ ಅವರ ಮಣಿಪುರ ಹಾಗೂ ಅಸ್ಸಾಂ ಭೇಟಿಯನ್ನು ಲೇವಡಿ ಮಾಡಿ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು ‘ರೋಗಗ್ರಸ್ಥ ಮನಃಸ್ಥಿತಿಯ ‘ಬಾಲಕ ಬುದ್ಧಿ’ಯು ದುರಂತ ಪ್ರವಾಸ ಕೈಗೊಂಡಿದೆ’ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ‘ಮಣಿಪುರದಲ್ಲಿನ ಸಂಘರ್ಷವು ಕಾಂಗ್ರೆಸ್‌ ನೀಡಿದ ಬಳುವಳಿಯಾಗಿದೆ. ದಶಕಗಳವರೆಗೆ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ನಾಗರಿಕರ ಸಾವು ಪೊಲೀಸರು ಹಾಗೂ ಸೈನಿಕರ ಹತ್ಯೆಗಳು ಇಲ್ಲಿ ಸಂಭವಿಸಿವೆ’ ಎಂದೂ ಹೇಳಿದ್ದಾರೆ.  ಯಾವ ಯಾವ ವರ್ಷದಲ್ಲಿ ಎಷ್ಟು ಹತ್ಯೆಗಳು ಇಲ್ಲಿ ಆಗಿವೆ ಎಂಬುದನ್ನು ಪಟ್ಟಿಮಾಡಿರುವ ಮಾಳವೀಯಾ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರನ್ನೂ ದೂಷಿಸಿದ್ದಾರೆ. ‘ಮೂರನೇ ಬಾರಿಗೆ ಸೋತಿರುವ ರಾಹುಲ್‌ ಗಾಂಧಿ ಅವರನ್ನು ಬಿಡಿ ಯಾವುದಾದರು ಕಾಂಗ್ರೆಸ್‌ ನಾಯಕರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನೂ ಒಳಗೊಂಡು ಗಲಭೆಯಿಂದ ಪೀಡಿತವಾಗಿದ್ದ ಅಸ್ಸಾಂಗೆ ಭೇಟಿ ನೀಡಿದ್ದರೆ? ಸಿಂಗ್‌ ಅವರಂತೂ ಇಲ್ಲಿಂದಲೇ ರಾಜ್ಯಸಭೆ ಸದಸ್ಯರಾಗಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT