ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಾಯಕಾರಿ ಸಂಕಥನ ಸೃಷ್ಟಿಸಲು ರಾಹುಲ್ ಯತ್ನ: ಬಿಜೆಪಿ ಕಿಡಿ

Published : 10 ಸೆಪ್ಟೆಂಬರ್ 2024, 14:51 IST
Last Updated : 10 ಸೆಪ್ಟೆಂಬರ್ 2024, 14:51 IST
ಫಾಲೋ ಮಾಡಿ
Comments

ನವದೆಹಲಿ: ಸಿಖ್ ಸಮುದಾಯದ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಆಡಿರುವ ಮಾತುಗಳ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿಯು, ಸೂಕ್ಷ್ಮ ವಿಷಯಗಳ ಬಗ್ಗೆ ವಿದೇಶಗಳಲ್ಲಿ ಮಾತನಾಡಿ, ಅಪಾಯಕಾರಿ ಸಂಕಥನವನ್ನು ಸೃಷ್ಟಿಸಲು ರಾಹುಲ್ ಯತ್ನಿಸುತ್ತಿದ್ದಾರೆ ಎಂದು ಹೇಳಿದೆ.

ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರು, ‘ನಿತ್ಯದ ಜೀವನಕ್ಕೆ ವಿದೇಶಗಳಲ್ಲಿ ಕಷ್ಟಪಡುತ್ತಿರುವ ಸಿಖ್ ಸಮುದಾಯದವರಲ್ಲಿ ಸುಳ್ಳುಗಳನ್ನು ಹರಡಲು ರಾಹುಲ್ ಯತ್ನಿಸಿದ್ದಾರೆ, ಅವರ ಹೇಳಿಕೆಗಳು ಅಪಶಕುನದಂತೆ ಇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಿಖ್ಖರಿಗೆ ಟರ್ಬನ್ ಧರಿಸಲು ಆಗುತ್ತಿಲ್ಲ ಎಂದು ರಾಹುಲ್ ನೀಡಿರುವ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಸಿಖ್ ಸಮುದಾಯಕ್ಕೆ ಸೇರಿರುವ ಸಚಿವ ಸಿಂಗ್ ಹೇಳಿದರು.

ಕಾಂಗ್ರೆಸ್ ಆಡಳಿತ ಇದ್ದಾಗ, 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿದ ಪುರಿ ಅವರು, ‘ಒಂದು ಸಮುದಾಯವಾಗಿ ನಾವು ಆತಂಕವನ್ನು ಎದುರಿಸಿದ, ಅಭದ್ರತೆಯ ಭಾವನೆ ಅನುಭವಿಸಿದ ಹಾಗೂ ಅಸ್ತಿತ್ವಕ್ಕೆ ಬೆದರಿಕೆ ಎದುರಾಗಿದ್ದನ್ನು ಕಂಡ ಸಂದರ್ಭ ಇತಿಹಾಸದಲ್ಲಿ ಇದೆಯೆಂದಾದರೆ ಅದು ರಾಹುಲ್ ಅವರ ಕುಟುಂಬವು ಅಧಿಕಾರದಲ್ಲಿ ಇದ್ದಾಗಿನ ಸಂದರ್ಭ’ ಎಂದರು.

‘1984ರಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಂಡು ಹತ್ಯಾಕಾಂಡವೊಂದು ನಡೆಯಿತು. ಮೂರು ಸಾವಿರ ಮಂದಿ ಅಮಾಯಕರನ್ನು ಹತ್ಯೆ ಮಾಡಲಾಯಿತು. ಜನರನ್ನು ಮನೆಗಳಿಂದ ಹೊರಗೆಳೆದು, ಅವರ ಸುತ್ತ ಟಯರ್ ಇರಿಸಿ, ಜೀವಂತವಾಗಿ ಅವರನ್ನು ಸುಡಲಾಯಿತು’ ಎಂದು ಪುರಿ ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಅವರು ಈಚೆಗೆ ‘ನಮ್ಮ ರಾಷ್ಟ್ರೀಯ ಅಸ್ಮಿತೆ, ಏಕತೆ, ವಿವಿಧತೆಯಲ್ಲಿನ ಏಕತೆಯ ಶಕ್ತಿಯ’ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ಅವರು ಹೊಸ ಸಂಕಥನವೊಂದನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ನನ್ನ ಪ್ರಕಾರ ಇದು ಅಪಾಯಕಾರಿ ಸಂಕಥನ’ ಎಂದು ಪುರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT