ನವದೆಹಲಿ: ರಾಜಸ್ಥಾನವು ಅತ್ಯಾಚಾರ ಪ್ರಕರಣಗಳ ರಾಜಧಾನಿಯಾಗಿ ಬದಲಾಗುತ್ತಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅಶೋಕ್ ಗೆಹಲೋತ್ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಸಂಸದೆ ರಂಜಿತಾ ಕೊಲಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯವು ಮಹಿಳೆಯರನ್ನು ಗೌರವಿಸುವ ಸಂಪ್ರದಾಯ ಹೊಂದಿದೆ. ಆದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಸಂಸ್ಕೃತಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯ ಮತ್ತೊಬ್ಬ ಸಂಸದೆ ದಿಯಾ ಕುಮಾರಿ ಅವರು, ರಾಜ್ಯದ ಬಿಲ್ವಾರಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟ ಇತ್ತೀಚಿನ ಘಟನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅತ್ಯಾಚಾರ ಪ್ರಕರಣಗಳ ಸಂಬಂಧ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ನೀಡಿರುವ ಅಂಕಿಅಂಶಗಳ ಪ್ರಕಾರ, ರಾಜಸ್ಥಾನದಲ್ಲಿ ಮಹಿಳೆಯರು ಮನೆಗಳಲ್ಲಿಯೂ ಸುರಕ್ಷಿತವಾಗಿಲ್ಲ ಎಂದು ಕುಮಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಅವರು ರಾಜಸ್ಥಾನಕ್ಕೆ ಕೇವಲ ಪ್ರವಾಸಕ್ಕೆ ಬರುತ್ತಾರೆ ವಿನಃ ಇಲ್ಲಿನ ಸಂತ್ರಸ್ತ ಮಹಿಳೆಯರ ಕುಟುಂಬದವರೊಂದಿಗೆ ಮಾತನಾಡುವುದಿಲ್ಲ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.