ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಗಾಂಧಿ ಹತ್ಯೆ ಕೇಸ್: ಜೈಲಿನಿಂದ ಬಿಡುಗಡೆ ಕೋರಿ ಸುಪ್ರೀಂಗೆ ನಳಿನಿ ಅರ್ಜಿ

Last Updated 12 ಆಗಸ್ಟ್ 2022, 7:30 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ತಮ್ಮ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದ ಮತ್ತೊಬ್ಬ ಆರೋಪಿ ಎ ಜಿ ಪೆರರಿವಾಳನ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ತಮ್ಮನ್ನೂ ಬಿಡುಗಡೆ ಮಾಡಬೇಕೆಂದು ಕೋರಿ ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಜೂನ್ 17ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ನಳಿನಿ ಶ್ರೀಹರನ್ ಮತ್ತು ರವಿಚಂದ್ರನ್ ಅವರು ರಾಜ್ಯಪಾಲರ ಒಪ್ಪಿಗೆಯ ಪತ್ರರಹಿತವಾಗಿ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿತ್ತು.

ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್‌ಗಳಿಗೆ ಆ ರೀತಿಯ ಆದೇಶ ಮಾಡಲು ಅಧಿಕಾರವಿಲ್ಲ, 142ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಹೊಂದಿರುವ ಸುಪ್ರೀಂ ಕೋರ್ಟ್ ಮಾತ್ರ ಬಿಡುಗಡೆ ಮಾಡಬಹುದು ಎಂದು ಅವರ ಅರ್ಜಿಗಳನ್ನು ತಿರಸ್ಕರಿಸುವ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಹೇಳಿತ್ತು.

ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಬರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು, 30 ವರ್ಷಗಳಿಂದ ಸೆರೆವಾಸ ಅನುಭವಿಸಿದ್ದ ಪೆರಾರಿವಾಳನ್ ಅವರ ಬಿಡುಗಡೆಗೆ ಮೇ 18ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು

ಮೇ 21, 1991ರ ರಾತ್ರಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆಯುತ್ತಿದ್ದ ಚುನಾವಣಾ ರ್‍ಯಾಲಿಯಲ್ಲಿ ಧನು ಎಂಬ ಮಹಿಳಾ ಆತ್ಮಾಹುತಿ ಬಾಂಬರ್‌ ನಡೆಸಿದ ದಾಳಿಯಲ್ಲಿ ರಾಜೀವ್ ಗಾಂಧಿ ಸಾವಿಗೀಡಾಗಿದ್ದರು.

ಮೇ 1999ರ ಆದೇಶದಲ್ಲಿ, ಸುಪ್ರೀಂ ಕೋರ್ಟ್ ನಾಲ್ವರು ಅಪರಾಧಿಗಳಾದ ಪೆರಾರಿವಾಳನ್, ಮುರುಗನ್, ಸಂತನು ಮತ್ತು ನಳಿನಿ ಅವರ ಮರಣದಂಡನೆಯನ್ನು ಎತ್ತಿಹಿಡಿದಿತ್ತು.

ಬಳಿಕ, 2014ರಲ್ಲಿ, ಅಪರಾಧಿಗಳ ಕ್ಷಮಾದಾನ ಅರ್ಜಿಗಳ ವಿಲೇವಾರಿಯಲ್ಲಿ 11 ವರ್ಷಗಳ ವಿಳಂಬವನ್ನು ಪರಿಗಣಿಸಿ, ಸಂತನು ಮತ್ತು ಮುರುಗನ್ ಜೊತೆಗೆ ಪೆರಾರಿವಾಳನ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. 2001ರಲ್ಲಿ ನಳಿನಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT