ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Parliament | ರಾಮಮಂದಿರ: ಸುದೀರ್ಘ ಚರ್ಚೆ

ರಾಜ್ಯಸಭೆ, 17ನೇ ಲೋಕಸಭೆಯ ಕೊನೆಯ ಅಧಿವೇಶನಕ್ಕೆ ತೆರೆ
Published 11 ಫೆಬ್ರುವರಿ 2024, 0:30 IST
Last Updated 11 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಹಾಗೂ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಮೇಲಿನ ಸುದೀರ್ಘ ಚರ್ಚೆಯೊಂದಿಗೆ 17ನೇ ಲೋಕಸಭೆಯ ಕೊನೆಯ ಅಧಿವೇಶನಕ್ಕೆ ಶನಿವಾರ ತೆರೆಬಿತ್ತು. 

ರಾಜ್ಯಸಭೆಯ ಅಧಿವೇಶನದಲ್ಲೂ ಕೊನೆಯ ದಿನ ರಾಮಮಂದಿರದ ಬಗ್ಗೆ ಚರ್ಚೆ ನಡೆಯಿತು. ಜನವರಿ 31 ರಂದು ಆರಂಭವಾಗಿದ್ದ ಬಜೆಟ್‌ ಅಧಿವೇಶನವು 17ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿತ್ತು. ಏಪ್ರಿಲ್‌– ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.

‘ರಾಜ್ಯಸಭೆಯ 263ನೇ ಅಧಿವೇಶನ ಕೊನೆಗೊಂಡಿದೆ. ಚುನಾವಣೆಗೆ ಮುನ್ನ ಇದು ಕೊನೆಯ ಅಧಿವೇಶನ ಆಗಿದೆ. ಕೆಲವೇ ದಿನಗಳಲ್ಲಿ ನಮಗೆ ‘ಪ್ರಜಾಪ್ರಭುತ್ವದ ಹಬ್ಬ’ ಎನಿಸಿರುವ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ’ ಎಂದು ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನಕರ್ ಹೇಳಿದರು. 

ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ‘ಅಯೋಧ್ಯೆ ರಾಮಮಂದಿರ ವಿಷಯದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಭಾರತದ ಜಾತ್ಯತೀತ ತತ್ವವನ್ನು ಜಗತ್ತಿನಲ್ಲಿ ಪ್ರತಿಫಲಿಸುವಂತೆ ಮಾಡಿದೆ’ ಎಂದು ಬಣ್ಣಿಸಿದರು.

'ಯಾವುದೇ ದೇಶದ ಬಹುಸಂಖ್ಯಾತ ಸಮುದಾಯವು ತನ್ನ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ಕನಸು ಈಡೇರಲು ಇಷ್ಟು ಸುದೀರ್ಘ ಅವಧಿಯವರೆಗೆ ಕಾಯುತ್ತಿರಲಿಲ್ಲ. ರಾಮರಾಜ್ಯದ ಕಲ್ಪನೆಯು ಯಾವುದೇ ಒಂದು ಧರ್ಮ ಅಥವಾ ಪಂಗಡಕ್ಕೆ ಸೀಮಿತವಾದುದಲ್ಲ’ ಎಂದು ಹೇಳಿದರು.

ರಾಮಮಂದಿರ ಕುರಿತು ನಾಲ್ಕು ಗಂಟೆ ನಡೆದ ಚರ್ಚೆಯ ಬಳಿಕ ನಿರ್ಣಯವನ್ನು ಓದಿದ ಸ್ಪೀಕರ್‌ ಓಂ ಬಿರ್ಲಾ, ‘ರಾಮಮಂದಿರ ನಿರ್ಮಾಣ ಐತಿಹಾಸಿಕ ಸಾಧನೆಯಾಗಿದ್ದು, ಇದು ಭವಿಷ್ಯದ ಪೀಳಿಗೆಗೆ ಭರವಸೆ ಮತ್ತು ಏಕತೆಯ ಸಂದೇಶವನ್ನು ಸಾರಲಿದೆ’ ಎಂದು ನುಡಿದರು.

ಚರ್ಚೆಯಲ್ಲಿ ಪಾಲ್ಗೊಂಡ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ದೇಶದ 17 ಕೋಟಿ ಮುಸ್ಲಿಮರಲ್ಲಿ ತಾವು ಪರಕೀಯರು ಎಂಬ ಭಾವನೆ ಮೂಡಿದೆ. ನಾನು ಬಾಬರ್‌, ಜಿನ್ನಾ ಅಥವಾ ಔರಂಗಜೇಬನ ವಕ್ತಾರನೇ? ಮರ್ಯಾದಾ ಪುರುಷೋತ್ತಮನಾದ ರಾಮನನ್ನು ನಾನು ಗೌರವಿಸುತ್ತೇನೆ. ಆದರೆ ನಾಥೂರಾಮ್‌ ಗೋಡ್ಸೆಯನ್ನು ದ್ವೇಷಿಸುವೆ’ ಎಂದು ಹೇಳಿದರು.

ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನಾ (ಯುಬಿಟಿ) ಹೊರತುಪಡಿಸಿ ‘ಇಂಡಿಯಾ’ ಮೈತ್ರಿಕೂಟದ ಇತರ ಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ. ಡಿಎಂಕೆ, ಸಿಪಿಎಂ, ಮುಸ್ಲಿಂ ಲೀಗ್‌, ಟಿಎಂಸಿ ಮತ್ತು ಆರ್‌ಎಸ್‌ಪಿ ಸದಸ್ಯರು ಚರ್ಚೆ ಆರಂಭವಾಗುತ್ತಿದ್ದಂತೆಯೇ ಉಭಯ ಸದನಗಳಿಂದ ಹೊರನಡೆದರು. 

ಲೋಕಸಭೆಯಲ್ಲಿ ಕಾಂಗ್ರೆಸ್‌ನ ಗೌರವ್‌ ಗೊಗೊಯ್ ಮತ್ತು ಶಿವಸೇನಾದ (ಯುಬಿಟಿ) ಅರವಿಂದ ಸಾವಂತ್, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಪ್ರಮೋದ್‌ ತಿವಾರಿ, ರಣದೀಪ್‌ ಸುರ್ಜೆವಾಲಾ ಹಾಗೂ ಶಿವಸೇನಾದ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಅವರು ಚರ್ಚೆಯಲ್ಲಿ ಭಾಗವಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT