ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಸಂಜು ಸ್ಯಾಮ್ಸನ್‌ಗೆ ದಂಡ

Published 8 ಮೇ 2024, 6:33 IST
Last Updated 8 ಮೇ 2024, 6:33 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಶೇಕಡ 30ರಷ್ಟು ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ.

ಮಂಗಳವಾರ ನಡೆದ ಡೆಲ್ಲಿ ವಿರುದ್ಧದ 222 ರನ್‌ಗಳ ಚೇಸ್‌ನಲ್ಲಿ ಸಂಜು ಸ್ಯಾಮ್ಸನ್ 86 ರನ್ ಸಿಡಿಸಿ ಅಬ್ಬರಿಸಿದರು. ಆದರೆ, ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಆಗಲಿಲ್ಲ. ಈ ಪಂದ್ಯದ 16ನೇ ಓವರ್‌ನಲ್ಲಿ ಅವರು ಬೌಂಡರಿ ಬಳಿ ಶಾಯ್ ಹೋಪ್ ತಮ್ಮ ಕ್ಯಾಚ್ ಹಿಡಿದಾಗ ಅಂಪೈರ್ ಔಟ್ ಕೊಟ್ಟಿದ್ದನ್ನು ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ದಂಡ ವಿಧಿಸಿರಬಹುದು ಎಂದು ವರದಿ ತಿಳಿಸಿದೆ.

ಹೋಪ್ ಕ್ಯಾಚ್ ಹಿಡಿದಾಗ ಅವರ ಕಾಲು ಬೌಂಡರಿ ಗೆರೆಗೆ ತಾಕಿತ್ತೇ ಎಂಬುದು ಪ್ರಶ್ನೆಯಾಗಿತ್ತು. ಮೂರನೇ ಅಂಪೈರ್ ಔಟ್ ಎಂದು ತೀರ್ಪಿತ್ತರು. ಆದರೆ, ಇದನ್ನು ಒಪ್ಪದ ಸ್ಯಾಮ್ಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮೊದಲಿಗೆ ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ಅವರು, ಬಳಿಕ ಹಿಂದಿರುಗಿ ಅಂಪೈರ್ ಜೊತೆ ಮಾತಿನ ಚಕಮಕಿ ನಡೆಸಿದರು.

‘ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.8ರ ಅಡಿಯ ಹಂತ–1ರ ಉಲ್ಲಂಘನೆ ಮಾಡಿದ್ದಾರೆ. ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿಯವರ ದಂಡವನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಹಂತ–1ರ ಉಲ್ಲಂಘನೆಯಲ್ಲಿ ರೆಫರಿ ನಿರ್ಧಾರವೇ ಅಂತಿಮ’ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಏಪ್ರಿಲ್ 10ರಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್‌ ರೇಟ್‌ಗಾಗಿ ಸ್ಯಾಮ್ಸನ್‌ಗೆ ₹12 ಲಕ್ಷ ದಂಡ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT