ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ರಾಮಮಂದಿರ ಆವರಣಕ್ಕೆ ಸರಯೂ ನದಿ ನೀರು ಹರಿಸಲು ಯೋಜನೆ

Published 27 ಡಿಸೆಂಬರ್ 2023, 9:56 IST
Last Updated 27 ಡಿಸೆಂಬರ್ 2023, 10:10 IST
ಅಕ್ಷರ ಗಾತ್ರ

ಅಯೋಧ್ಯೆ: ‘ರಾಮ ಜನ್ಮಭೂಮಿ ಆವರಣದಲ್ಲಿ ಲಭ್ಯವಿರುವ ನೀರು ಸಾಕಾಗದಿದ್ದಲ್ಲಿ ಸರಯೂ ನದಿಯ ನೀರು ಹರಿಸುವ ಕುರಿತು ಯೋಜನೆ ರೂಪಿಸಲಾಗುವುದು’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಹೇಳಿದರು.

‘ರಾಮಮಂದಿರ ನಿರ್ಮಾಣವಾಗುತ್ತಿರುವ 70 ಎಕರೆ ಆವರಣದಲ್ಲಿ ಸುಮಾರು 20 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನೂರು ವರ್ಷಕ್ಕೂ ಹಿಂದಿನ ಮರಗಳಿರುವ ದಟ್ಟ ಹಸಿರು ಪ್ರದೇಶವಿದೆ. ಸೂರ್ಯನ ಕಿರಣಗಳೂ ಈ ಪ್ರದೇಶದಲ್ಲಿ ಹಾಯುವುದು ಕಷ್ಟ. ಹೀಗಾಗಿ ರಾಮಜನ್ಮಭೂಮಿಯಲ್ಲಿ ಅಂತರ್ಜಲ ಮಟ್ಟ ಎಂದಿಗೂ ಕುಸಿಯದು. ಒಂದೊಮ್ಮೆ ಹಾಗಾದಲ್ಲಿ ಸರಯೂ ನದಿ ನೀರನ್ನು ಹರಿಸಲು ಕ್ರಮ ಜರುಗಿಸಲಾಗುವುದು. ಮಂದಿರ ನಿರ್ಮಾಣದಲ್ಲಿ ಶೂನ್ಯ ತ್ಯಾಜ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಇಲ್ಲಿ ಯಾವುದನ್ನೂ ವ್ಯರ್ಥ ಮಾಡಲಾಗದು’ ಎಂದರು.

‘ರಾಮಮಂದಿರ ಪ್ರದೇಶವು ಆತ್ಮನಿರ್ಭರವಾಗಿದೆ. ಇಲ್ಲಿ ದಟ್ಟ ಹಸಿರು ಪ್ರದೇಶ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಅಗ್ನಿ ಶಾಮಕ ಕೇಂದ್ರ ಮತ್ತು ಪ್ರತ್ಯೇಕ ವಿದ್ಯುತ್ ಪೂರೈಕೆ ಘಟಕ ಇದೆ. ಮೊದಲ ಹಂತದ ನಿರ್ಮಾಣ ಅಂತಿಮ ಘಟ್ಟಕ್ಕೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜ. 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ರಾಯ್ ತಿಳಿಸಿದರು.

‘ಡಿ. 30ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಮರು ಅಭಿವೃದ್ಧಿಗೊಂಡ ರೈಲು ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT