ವಯನಾಡ್ (ಕೇರಳ): ವಯನಾಡ್‌ನಲ್ಲಿ ನಡೆದ ಭೀಕರ ಭೂಕುಸಿತದಿಂದಾಗಿ ಕಾಣೆಯಾದವರನ್ನು ಹುಡುಕುವ ಸಲುವಾಗಿ ಸನ್‌ರೈಸ್ ಕಣಿವೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಕ್ಷಣಾ ತಂಡವನ್ನು ಇಳಿಸಲಾಗಿದೆ.
‘ಆರು ಯೋಧರು, ಕೇರಳದ ವಿಶೇಷ ಪೊಲೀಸ್ ಪಡೆಯ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಅರಣ್ಯ ವೀಕ್ಷಕರನ್ನು ಒಳಗೊಂಡ ರಕ್ಷಣಾ ತಂಡವನ್ನು ಛಾಲಿಯರ್ ನದಿದಂಡೆಯಲ್ಲಿರುವ ಅಪಾಯಕಾರಿ ಭೂಪ್ರದೇಶದಲ್ಲಿ ಹೆಲಿಕಾಪ್ಟರ್ ಮೂಲಕ ಇಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
‘ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಗಿದ ಬಳಿ, ರಕ್ಷಣಾ ತಂಡವನ್ನು ಮತ್ತೊಂದು ಸ್ಥಳದಲ್ಲಿ ಇಳಿಸಲಾಗುತ್ತದೆ. ಅಪಾಯಕಾರಿ ಪ್ರದೇಶದಲ್ಲಿ ಜನರನ್ನು ಇಳಿಸುವ ಮತ್ತು ಮೇಲೆತ್ತುವ ಸಾಮರ್ಥ್ಯವನ್ನು ಹೊಂದಿದ ಸುಧಾರಿತ ಲಘು ವಿಮಾನವನ್ನು ಕಾರ್ಯಾಚರಣೆಗೆ ಬಳಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.